ಚಿಕ್ಕಮಗಳೂರು: ನಂದಿನಿ ಹಾಲಿನ ದರ ಹಾಗೂ ಅಬಕಾರಿ ಸುಂಕ ಏರಿಕೆ ಮಾಡಿದ್ದಾರೆ. ಬೆಲೆ ಏರಿಕೆ ಮಾಡಿ ಎಂದು ರಾಜ್ಯದ ಜನ ನಿಮಗೆ ಅಧಿಕಾರ ಕೊಟ್ಟಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಅಧಿಕಾರ ಕೊಟ್ಟಿರುವುದು ನೀವು ಹೇಳಿದ ಗ್ಯಾರಂಟಿ ಸ್ಕೀಮ್ ಗಳನ್ನು ನಂಬಿ. ಬೆಲೆ ಏರಿಕೆ ಬರೆ ಎಳೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.
ಅಮುಲ್ ಮತ್ತು ನಂದಿನಿ ತಾಂತ್ರಿಕ ಸಹಕಾರ ಬಗ್ಗೆ ಅಮಿತ್ ಶಾ ಸಲಹೆ ನೀಡಿದ್ದರು. ರೈತರಿಗೆ ಸಹಾಯ ಮಾಡುವ ಸದುದ್ದೇಶದಿಂದ ಅವರು ಸಲಹೆ ನೀಡಿದ್ದರು. ಚುನಾವಣೆ ವೇಳೆ ಅಮಿತ್ ಶಾ ಅವರ ಹೇಳಿಕೆ ಬಗ್ಗೆ ಅಪಪ್ರಚಾರ ಮಾಡಿದರು ಎಂದು ಹೇಳಿದ್ದಾರೆ.
ಕಳೆದ 50 ವರ್ಷದಿಂದ ಟಿಟಿಡಿಗೆ ನಂದಿನಿ ತುಪ್ಪ ಪೂರೈಕೆಯಾಗುತ್ತಿದೆ. ನಂದಿನಿ ತುಪ್ಪ ಸರಬರಾಜು ಸ್ಥಗಿತ ಸುದ್ದಿ ಕೇಳಿ ದುಃಖವಾಗಿದೆ. ತಿರುಪತಿ ಪ್ರಸಾದಕ್ಕೆ ನಂದಿನಿ ತುಪ್ಪ ಸೇರುತ್ತದೆ ಎನ್ನುವುದೇ ಹೆಮ್ಮೆಯ ಸಂಗತಿ. ಸಹಕಾರ ಸಚಿವರು, ಕೆಎಂಎಫ್ ಅಧ್ಯಕ್ಷರು ಪ್ರತಿಷ್ಠೆ ಬಿಟ್ಟು ಟಿಟಿಡಿ ಜೊತೆ ಮಾತನಾಡುವಂತೆ ಸಲಹೆ ನೀಡುತ್ತೇನೆ. 50 ವರ್ಷದ ವ್ಯವಹಾರಿಕ ಸಂಬಂಧವನ್ನು ಮುಂದುವರೆಸಬೇಕು. ಸಲಹೆ ಸ್ವೀಕಾರ ಮಾಡದಿದ್ದರೆ ಹಾಲು ಉತ್ಪಾದಕರಿಗೆ ನಷ್ಟವಾಗುತ್ತದೆ ಎಂದು ಸಿ.ಟಿ. ರವಿ ಹೇಳಿದ್ದಾರೆ.