ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಸುವರ್ಣಸೌಧದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬಂಧಿಸಲಾಗಿದೆ.
35 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಪರಿಸ್ಥಿತಿ ನೋಡಿರಲಿಲ್ಲ ಎಂದು ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮದುರ್ಗದಲ್ಲಿ ಮಾವರು ಮಾತನಾಡಿದ ಅವರು, ಪೊಲೀಸರಿಗೆ ಮೇಲಿಂದ ಮೇಲೆ ಡೈರೆಕ್ಷನ್ ಗಳು ಬರುತ್ತಿವೆ. ಮಾನಸಿಕ ಹಿಂಸೆ ಕೊಡಲು ಈ ರೀತಿ ಷಡ್ಯಂತ್ರ ಮಾಡಿದ್ದಾರೆ. ಸದನದಲ್ಲಿ ನಾನೇನು ಮಾತನಾಡಿದ್ದೇನೆ ಎಂದು ಸಭಾಪತಿ ಹೇಳಬೇಕಿತ್ತು, ಆದರೆ, ಉಪಮುಖ್ಯಮಂತ್ರಿ ನಡವಳಿಕೆ ಹೇಗೆ ಇತ್ತು ಎಂಬುದನ್ನು ಗಮನಿಸಿದ್ದೀರಿ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಡೆ ಹೇಗಿತ್ತು ಎಂಬುದನ್ನು ಗಮನಿಸಿದ್ದೀರಿ ಎಂದು ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಮೂರು ಬಾರಿ ನನ್ನ ಮೇಲೆ ದಾಳಿಯಾಗಿದೆ. ನಾನು ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ನನ್ನ ಹಕ್ಕಿನ ಚ್ಯುತಿಯಾಗಿದೆ. ಹೋರಾಟದ ಮೂಲಕ ಎದುರಿಸುತ್ತೇನೆ. ನಾನೇನು ಟೆರರಿಸ್ಟ್ ಅಲ್ಲ, ದಾಳಿ ಮಾಡಲು ಬಂದವರನ್ನು ಬಿಟ್ಟು ಕಳುಹಿಸಿದ್ದಾರೆ. ಇದೆಲ್ಲ ಷಡ್ಯಂತ್ರದ ಒಂದು ಭಾಗ ಎಂದು ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಿನ ಜಾವ 3 ಗಂಟೆಗೆ ರಾಮದುರ್ಗ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಧರಣಿ ಕುಳಿತ ರವಿ, ನನ್ನನ್ನು ಈ ರೀತಿ ಸುತ್ತು ಹಾಕಿಸುವ ಬದಲು ಶೂಟ್ ಮಾಡಿ ಸಾಯಿಸಿ. ಯಾಕೆ ಹೀಗೆ ರಾತ್ರಿ ಸುತ್ತಾಡಿಸುತ್ತಿದ್ದೀರಿ. ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಬದಲು ಹೀಗೆ ಓಡಾಡುತ್ತಿರುವುದು ಏಕೆ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.