ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅಶ್ಲೀಲ ಪದ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗಲು ಸಿಎಂ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಅವರಿಗೆ ಸಿಐಡಿ ನೋಟಿಸ್ ನೀಡಿದೆ.
ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸಿಐಡಿ ಡಿವೈಎಸ್ಪಿ ನೋಟಿಸ್ ನೀಡಿದ್ದಾರೆ. ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಶ್ರೀನಿವಾಸ್ ಅವರಿಗೂ ನೋಟಿಸ್ ನೀಡಲಾಗಿದೆ. ಕಲಬುರ್ಗಿ ಮೂಲದ ಸದಸ್ಯ ಬೇಗಂ ಅವರಿಗೂ ನೋಟಿಸ್ ನೀಡಲಾಗಿದೆ.
ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿರುವ ಸಿದ್ದರಾಮಯ್ಯ ಪುತ್ರ ಯತೀಂದ್ರ ವಿಚಾರಣೆಗೆ ಹಾಜರಾಗಲಿದ್ದಾರೆ, ಉಮಾಶ್ರೀ, ನಾಗರಾಜ್ ಯಾದವ್ ಸೇರಿದಂತೆ ಮೂವರು ವಿಧಾನಪರಿಷತ್ ಸದಸ್ಯರಿಂದ ಹೇಳಿಕೆ ದಾಖಲಿಸಿದ್ದು, ಇಂದು ಮೂವರು ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೂಲಕ ಸಿ.ಟಿ. ರವಿಗೆ ಸಿಐಡಿ ನೋಟಿಸ್ ಕಳುಹಿಸಿ ತನಿಖೆಗೆ ಸಹಕರಿಸುವಂತೆ ಕೋರಿದೆ. ಸಿ.ಟಿ. ರವಿ ಇಂದು ನೋಟಿಸ್ ಸಂಬಂಧ ಬೆಂಗಳೂರಿನ 42ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.