ಬೆಂಗಳೂರು: ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಮಿಟಿ. ಅಕ್ರಮ ಚಟುವಟಿಕೆ ನಡೆಸಲು ಬೇನಾಮಿಗಳನ್ನು ರಾಜ್ಯಾದ್ಯಂತ ಸೃಷ್ಟಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆಗೆ ಈ ಸರ್ಕಾರವನ್ನು ಎಟಿಎಂ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
98 ಜನ ಬೇನಾಮಿಯ ಹೆಸರು ಹೊರಬರಬೇಕು. ಲೋಕಸಭೆ ಚುನಾವಣೆಗೆ ಎರಡು ಸಾವಿರ ಕೋಟಿ ಕೊಡ್ತೀನಿ ಎಂದು ಚರ್ಚೆ ನಡೆಸಿದ್ದಾರೆ. ಭ್ರಷ್ಟ ಬೆಂಗಳೂರು ಮಾಡಲು ಹೋಗುತ್ತಿದ್ದಾರೆ. ತಮ್ಮ ಪ್ರಾಮಾಣಿಕತೆ ಸಾಬೀತುಪಡಿಸಿಕೊಳ್ಳಬೇಕಾದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗುತ್ತಿಗೆದಾರರ ಮನೆ ಮೇಲೆ ದಾಳಿಯಾದರೆ ಡಿಸಿಎಂ ರಾಜಕೀಯ ಎನ್ನುತ್ತಾರೆ. ಐಟಿ ದಾಳಿ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಪ್ರಶ್ನೆ ಮಾಡುತ್ತಾರೆ. ಒಬ್ಬೊಬ್ಬರ ಮನೆಯಲ್ಲಿ 40, 42 ಕೋಟಿ ಸಿಕ್ಕಿದೆಯಲ್ಲ ಏನು ಹೇಳುತ್ತೀರಿ ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.