
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾರ್ವಜನಿಕ ಜೀವನ ಪರಿಶುದ್ಧವಲ್ಲ; ತನ್ನ ಭ್ರಷ್ಟಾಚಾರ ಗೊತ್ತಾಗಬಾರದೆಂದು, ಹೊರಗೆ ಬರಬಾರದು ಎಂಬ ಕಾರಣಕ್ಕಾಗಿಯೇ ಪೂರ್ವತಯಾರಿ ಮಾಡಿಕೊಂಡು ಭ್ರಷ್ಟಾಚಾರ ಮಾಡಿದ್ದಾರೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ವಿರುದ್ಧ 65ಕ್ಕೂ ಪ್ರಕರಣಗಳ ದೂರು ಸಲ್ಲಿಕೆಯಾಗಿವೆ. ಆ ದೂರುಗಳ ಸತ್ಯಾಸತ್ಯತೆ ಹೊರಕ್ಕೆ ಬರಬಾರದು ಎಂದು ಲೋಕಾಯುಕ್ತವನ್ನು ದುರ್ಬಲಗೊಳಿಸಿ, ಎಸಿಬಿ ರಚನೆ ಮಾಡಿಕೊಂಡು 15ಕ್ಕೂ ಹೆಚ್ಚು ಪ್ರಕರಣಗಳಿಗೆ ತನ್ನ ಅಧೀನದ ಎಸಿಬಿಯಲ್ಲಿ ಕ್ಲೀನ್ ಚಿಟ್ ಪಡೆದಿದ್ದಾರೆ. 50ಕ್ಕೂ ಹೆಚ್ಚು ಪ್ರಕರಣಗಳ ತನಿಖೆಯೇ ಆಗಿಲ್ಲ ಎಂದು ದೂರಿದ್ದಾರೆ.
ತನಿಖೆಯೇ ಆಗದಂತೆ ಮುನ್ನೆಚ್ಚರಿಕೆ ವಹಿಸಿ ನಾನು ಪ್ರಾಮಾಣಿಕ ಎಂದು ಅವರಿಗೆ ಅವರೇ ಹೇಳಿಕೊಳ್ಳುತ್ತಿದ್ದಾರೆ. ಈಗ ಸಿಬಿಐಗೆ ಇದ್ದ ಮುಕ್ತ ತನಿಖೆಯ ಅಧಿಕಾರವನ್ನು ಸಂಪುಟ ಸಭೆ ಮೊಟಕು ಮಾಡಿದೆ. ನೀವು ಪ್ರಾಮಾಣಿಕರಿದ್ದರೆ ನಿಮಗೆ ಸಿಬಿಐ ತನಿಖೆ ಮಾಡಿದರೆ ಭಯ ಏಕೆ? ನೀವು ಮತ್ತು ನಿಮ್ಮ ಸರ್ಕಾರ ಪರಮಭ್ರಷ್ಟ ಸರ್ಕಾರ ಎಂಬುದನ್ನು ನಿಮ್ಮ ನಿಲುವೇ ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
ಭ್ರಷ್ಟಾಚಾರದ ಮುಖವಾಡ ಹೊರಬೀಳುವ ಭಯದಿಂದ ಸಿಬಿಐ ತನಿಖೆ ಹಿಂಪಡೆಯುವ ನಿರ್ಣಯ ಮಾಡಿದ್ದಾರೆ. ಇದು ಸಂವಿಧಾನವಿರೋಧಿ ಮತ್ತು ಭ್ರಷ್ಟರು ಮಾತ್ರ ಮಾಡುವ ಕೆಲಸ. ರಾಜ್ಯಪಾಲರ ಪತ್ರಕ್ಕೆ ಕೇವಲ ಸಂಪುಟದ ನಿರ್ಣಯದ ಮೂಲಕ ಮಾತ್ರ ಉತ್ತರಿಸಬೇಕೆಂಬ ತೀರ್ಮಾನ ಹಾಸ್ಯಾಸ್ಪದ ಎಂದು ಹೇಳಿದ್ದಾರೆ.
ಹೈಕೋರ್ಟ್ ತೀರ್ಪನ್ನು ಜಮೀರ್ ಅಹ್ಮದ್ ಅವರು ರಾಜಕೀಯ ತೀರ್ಪು ಎಂದಿದ್ದಾರೆ. ನ್ಯಾಯಾಲಯವನ್ನೂ ಅಪನಂಬಿಕೆಯಿಂದ ನೋಡುವುದು ಕಾಂಗ್ರೆಸ್ಸಿಗೆ ಹೊಸದೇನೂ ಅಲ್ಲ. ಸಂವಿಧಾನ ಗೌರವಿಸುವವರು ಆಡುವ ಮಾತು, ನಡವಳಿಕೆ ಇದಲ್ಲ. ಜಮೀರ್ ಅಹ್ಮದ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಕಾಂಗ್ರೆಸ್ ಪಕ್ಷವು ಭಯಭೀತ ಸ್ಥಿತಿಯಲ್ಲಿದೆ. ತಮ್ಮ ಬಂಡವಾಳ, ಭ್ರಷ್ಟಾಚಾರ ಹೊರಕ್ಕೆ ಬರಬಾರದು ಎಂಬ ಕಾರಣಕ್ಕೋಸ್ಕರವೇ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.