ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ವರ್ಗಾವಣೆ ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ(KSAT) ಆದೇಶಿಸಿದೆ.
ವರ್ಗಾವಣೆ ಆದೇಶ ರದ್ದುಪಡಿಸುವಂತೆ ಕೋರಿ ಸಿ.ಎಸ್. ಷಡಾಕ್ಷರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೆ.ಎಸ್.ಎ.ಟಿ. ನ್ಯಾಯಾಂಗ ಸದಸ್ಯ ಟಿ. ನಾರಾಯಣಸ್ವಾಮಿ ಈ ಆದೇಶ ನೀಡಿದ್ದಾರೆ.
ಷಡಾಕ್ಷರಿ ಅವರನ್ನು ಕೋಲಾರಕ್ಕೆ ವರ್ಗಾವಣೆ ಮಾಡಿರುವುದನ್ನು ಮರು ಪರಿಶೀಲಿಸಬೇಕು. 2013ರ ಜೂನ್ 7 ರಂದು ಸರ್ಕಾರ ಹೊರಡಿಸಿರುವ ವರ್ಗಾವಣೆ ಮಾರ್ಗಸೂಚಿ ಆದೇಶ ಮತ್ತು ಷಡಾಕ್ಷರಿ ಸರ್ಕಾರಕ್ಕೆ ಸಲ್ಲಿಸಿದ ಮನವಿಗೆ ಇದು ಅನುಗುಣವಾಗಿಲ್ಲದ ಈ ವರ್ಗಾವಣೆ ಆದೇಶವನ್ನು ನಾಲ್ಕು ವಾರಗಳಲ್ಲಿ ಮರು ಪರಿಶೀಲಿಸಬೇಕು ಎಂದು ಹೇಳಲಾಗಿದೆ.
ಲೆಕ್ಕಪತ್ರ ಅಧೀಕ್ಷಕ ವೃಂದದ ಸಿ.ಎಸ್. ಷಡಕ್ಷರಿ ಅವರನ್ನು ಶಿವಮೊಗ್ಗದ ಸ್ಥಳೀಯ ಲೆಕ್ಕಪರಿಶೋಧನೆ ವೃತ್ತದ ಜಂಟಿ ನಿರ್ದೇಶಕರ ಸ್ಥಾನದಿಂದ ಕೋಲಾರದಲ್ಲಿ ಖಾಲಿ ಇದ್ದ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರ ಕಚೇರಿಯ ಲೆಕ್ಕಪತ್ರ ಅಧೀಕ್ಷಕ ಹುದ್ದೆಗೆ ವರ್ಗಾವಣೆ ಮಾಡಿ 2023ರ ನವೆಂಬರ್ 8 ರಂದು ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಷಡಾಕ್ಷರಿ ಕೆಎಸ್ಎಟಿ ಮೆಟ್ಟಿಲೇರಿದ್ದರು.