ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಓಂಕಾರ ತಾಳಗುಪ್ಪ ಸಾಗರ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸಾಗರದ ಗಾಂಧಿ ಮೈದಾನದಲ್ಲಿ ಗುರುವಾರ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ವತಿಯಿಂದ ಏರ್ಪಡಿಸಿದ್ದ ಸಮಾವೇಶದಲ್ಲಿ ಸಿ.ಎಸ್. ಷಡಾಕ್ಷರಿ ಭಾಷಣ ಮಾಡುವಾಗ, ನನಗೆ ಜೀವ ಬೆದರಿಕೆ ಹಾಕಿರುವುದಾಗಿ ಓಂಕಾರ ತಾಳಗುಪ್ಪ ದೂರು ನೀಡಿದ್ದಾರೆ. ತಾಲೂಕಿನ ಸರ್ಕಾರಿ ನೌಕರರಿಗೆ ತೊಂದರೆ ನೀಡಿದರೆ ನೀನು ಬದುಕುವುದು ಕಷ್ಟವಾಗುತ್ತದೆ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ದೂರು ಸ್ವೀಕರಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿ.ಎಸ್. ಷಡಕ್ಷರಿ ಅವರು, ಭಾಷಣ ಮಾಡುವ ಸಂದರ್ಭದಲ್ಲಿ ಸರ್ಕಾರಿ ನೌಕರರು ಅಧಿಕಾರಿಗಳು ಕರ್ತವ್ಯ ಲೋಪವೆಸಗಿದರೆ ಸಂಬಂಧಿಸಿದ ವ್ಯಕ್ತಿ ಕಾನೂನು ಬದ್ಧವಾಗಿ ಪ್ರಶ್ನೆ ಮಾಡಲಿ. ಅದನ್ನು ಬಿಟ್ಟು ಬೆದರಿಕೆ ಹಾಕುವುದು ಬ್ಲಾಕ್ಮೇಲ್ ಮಾಡಿ ಕಿರುಕುಳ ನೀಡುವುದು ಸರಿಯಲ್ಲ. ಅದನ್ನು ಸಹಿಸುವುದಿಲ್ಲ ಎಂದು ಹೇಳಿದ್ದೇನೆ ಹೊರತೂ ಯಾವ ಬೆದರಿಕೆಯನ್ನು ಹಾಕಿಲ್ಲ. ವ್ಯಕ್ತಿಯ ವಿರುದ್ಧ ನಾವು ಎರಡು ದೂರು ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.