ಶಿವಮೊಗ್ಗ: ಬೆಂಗಳೂರಿಗೆ ಕೆಲಸಕ್ಕೆ ಆಗಮಿಸುವ ಸರ್ಕಾರಿ ನೌಕರರಿಗೆ ವಾಸ್ತವ್ಯಕ್ಕೆ ಅನುಕೂಲವಾಗುವಂತೆ 300 ರಿಂದ 350 ಕೊಠಡಿಗಳ ಭವ್ಯ ಕಟ್ಟಡ ನಿರ್ಮಾಣಕ್ಕೆ ನೀಲಿ ನಕ್ಷೆ ರೂಪಿಸಲಾಗಿದೆ ಎಂದು ರಾಜ್ಯ ಸರ್ಕಾರ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬೆಂಗಳೂರಿಗೆ ಕೆಲಸಕ್ಕೆ ಆಗಮಿಸುವ ಸರ್ಕಾರಿ ನೌಕರರಿಗೆ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ಇನ್ನೆರಡು ತಿಂಗಳಲ್ಲಿ ಕಟ್ಟಡ ನಿರ್ಮಿಸಲಾಗುವುದು. ಸರ್ಕಾರಿ ನೌಕರರಿಗೆ ದಿನವೊಂದಕ್ಕೆ 100ರೂ. ಬಾಡಿಗೆ ದರದಲ್ಲಿ ಕೊಠಡಿ ನೀಡಲಾಗುವುದು. ಎಲ್ಲಾ ಜಿಲ್ಲೆಗಳಲ್ಲಿಯೂ ನೌಕರರ ಭವನ ಮತ್ತು ಸಭಾಂಗಣ, ನೌಕರರ ಮಕ್ಕಳ ಶುಭಕಾರ್ಯ ಮಾಡಲು ಅನುಕೂಲವಾಗುವಂತೆ ಕಲ್ಯಾಣ ಮಂಟಪಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.
ಮುಂದಿನ ವರ್ಷದೊಳಗೆ ಎನ್ಪಿಎಸ್ ನೌಕರರು ಒಪಿಎಸ್ ಗೆ ಪರಿವರ್ತನೆ ಆಗಬೇಕು. ಈ ನಿಟ್ಟಿನಲ್ಲಿ ಸೋಮವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದು, ಚರ್ಚೆ ನಡೆಸಲಾಗುವುದು. ಕೇಂದ್ರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ವೇತನ 2026ರಲ್ಲಿ ಕೊಡಿಸುವ ಗುರಿ ಗೊಂದಲಾಗಿದೆ. ಆರೋಗ್ಯ ಸಂಜೀವಿನಿ ಯೋಜನೆ ಜನವರಿ 1ರಿಂದಲೇ ಜಾರಿಗೆ ತರಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಎರಡನೇ ಬಾರಿಗೆ ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ನೌಕರರಿಗೆ ಋಣಿಯಾಗಿದ್ದೇನೆ. ರಾಜ್ಯ ಸರ್ಕಾರಿ ನೌಕರರ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.