ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ ಭಾರತೀಯರಿಗೆ ದೊಡ್ಡ ಶಾಕಿಂಗ್ ಸುದ್ದಿ ಸಿಕ್ಕಿದೆ. ಶೀಘ್ರದಲ್ಲೇ ಖಾಸಗಿ ಕ್ರಿಪ್ಟೋಕರೆನ್ಸಿ ನಿಷೇಧಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ನವೆಂಬರ್ 29 ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಕ್ರಿಪ್ಟೋಕರೆನ್ಸಿ ಮಸೂದೆ ಮಂಡಿಸಲಿದೆ.
ಕ್ರಿಪ್ಟೋ ಕರೆನ್ಸಿಯಲ್ಲಿ ಭಾರತದ 10 ಕೋಟಿ ಜನರು ಸುಮಾರು 70 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಇದು ಆಶ್ಚರ್ಯ ಹುಟ್ಟಿಸುತ್ತದೆ. ಜೊತೆಗೆ ಆತಂಕಕ್ಕೂ ಕಾರಣವಾಗಿದೆ. ಕ್ರಿಪ್ಟೋ ಕರೆನ್ಸಿ ಡಿಜಿಟಲ್ ಕರೆನ್ಸಿಯಾಗಿದ್ದು, ಇದರ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ. ಹಾಗಾಗಿ ಸರ್ಕಾರ ಇದನ್ನು ನಿಷೇಧಿಸಲು ಮುಂದಾಗಿದೆ.
ನವೆಂಬರ್ 29 ರಿಂದ ಶುರುವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲಾಗುವ ಹೊಸ ಮಸೂದೆಗಳ ಪಟ್ಟಿಯಲ್ಲಿ, ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ ಮಸೂದೆ ಇದೆ. ರಿಸರ್ವ್ ಬ್ಯಾಂಕ್ ಒಪ್ಪಿಗೆ ನೀಡಿದ ಕ್ರಿಪ್ಟೋ ಕರೆನ್ಸಿ ಹೊರತುಪಡಿಸಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಸರ್ಕಾರ ನಿಷೇಧಿಸಲಿದೆ.
ಕ್ರಿಪ್ಟೋಕರೆನ್ಸಿ ನಿಷೇಧದ ವಿಷಯ ಬೆಳಕಿಗೆ ಬರ್ತಿದ್ದಂತೆ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಯಾಗಿದೆ. ಕ್ರಿಪ್ಟೋ ಕರೆನ್ಸಿಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ. ಬಿಟ್ ಕಾಯಿನ್, ಎಥೆರಿಯಮ್ ಸೇರಿದಂತೆ ಎಲ್ಲಾ ಕ್ರಿಪ್ಟೋಗಳು ಕುಸಿತ ದಾಖಲಿಸಿವೆ. ಬಿಟ್ ಕಾಯಿನ್ ಅತಿದೊಡ್ಡ ಕುಸಿತ ಕಂಡಿದೆ. ಬಿಟ್ ಕಾಯಿನ್ ಶೇಕಡಾ 29 ರಷ್ಟು ಕುಸಿತ ಕಂಡಿದೆ.
ಕ್ರಿಪ್ಟೋ ಕರೆನ್ಸಿ ಕುಸಿತ
ಬಿಟ್ ಕಾಯಿನ್ ಶೇಕಡಾ 29.15
ಎಥೆರಿಯಂ ಶೇಕಡಾ 26.95
ಮೇಕರ್ ಶೇಕಡಾ 25.85
ಫೈಲ್ಕಾಯಿನ್ ಶೇಕಡಾ 30.05
ಕ್ರಿಪ್ಟೋಕರೆನ್ಸಿ ಕುರಿತು ಪಿಎಂ ನರೇಂದ್ರ ಮೋದಿ ಈಗಾಗಲೇ ಆತಂಕ ವ್ಯಕ್ತಪಡಿಸಿದ್ದಾರೆ. ಕ್ರಿಪ್ಟೋ ಕರೆನ್ಸಿ ಯುವಕರನ್ನು ಹಾಳುಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಪಂಚದಾದ್ಯಂತ 7 ಸಾವಿರಕ್ಕೂ ಹೆಚ್ಚು ವಿವಿಧ ಕ್ರಿಪ್ಟೋ ನಾಣ್ಯಗಳು ಚಲಾವಣೆಯಲ್ಲಿವೆ. 2013 ರವರೆಗೆ ಜಗತ್ತಿನಲ್ಲಿ ಕೇವಲ ಒಂದು ಕ್ರಿಪ್ಟೋಕರೆನ್ಸಿ ಇತ್ತು. ಇದನ್ನು ಬಿಟ್ಕಾಯಿನ್ ಎಂದು ಕರೆಯಲಾಗುತ್ತದೆ. ಇದನ್ನು 2009 ರಲ್ಲಿ ಪ್ರಾರಂಭಿಸಲಾಗಿತ್ತು.