ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ದೆಹಲಿಯ ಮಂಡೋಲಾ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರನ್, ರಾಜ್ಯಪಾಲ ವಿನಯ್ ಕುಮಾರ್ ಸಕ್ಸೇನಾ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾನೆ. ಜೈಲಿನ CRPF ಸಿಬ್ಬಂದಿ ಮಾಡಿರುವ ಹಲ್ಲೆಯ ಕಾರಣಕ್ಕೆ ತನ್ನ ಖಾಸಗಿ ಅಂಗಕ್ಕೆ ಗಾಯವಾಗಿದೆ ಎಂದು ಈ ಪತ್ರದಲ್ಲಿ ಗಂಭೀರ ಆರೋಪ ಮಾಡಲಾಗಿದೆ.
ಅಲ್ಲದೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಸತ್ಯೇಂದ್ರ ಜೈನ್ ವಿರುದ್ಧ ತಾನು ಮಾಡಿರುವ ಆರೋಪವನ್ನು ಹಿಂಪಡೆಯುವಂತೆ ಬೆದರಿಕೆ ಬರುತ್ತಿದ್ದು, ನನ್ನ ಜೀವಕ್ಕೆ ಅಪಾಯವಿದೆಯೆಂದು ಸುಕೇಶ್ ಚಂದ್ರಶೇಖರ್ ಹೇಳಿಕೊಂಡಿದ್ದಾನೆ. ಜೈಲು ಸಿಬ್ಬಂದಿ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಸುಕೇಶ್ ಚಂದ್ರಶೇಖರ್ ಗೆ ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಆತನ ವಕೀಲರು ತಿಳಿಸಿದ್ದಾರೆ.
ಇನ್ನು ಸುಕೇಶ್ ಚಂದ್ರಶೇಖರ್, ಆಮ್ ಆದ್ಮಿ ಪಕ್ಷದ ನಾಯಕರು 500 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದು 20 ಮಂದಿಯಿಂದ ಇದನ್ನು ಕೊಡಿಸಲು ಒತ್ತಾಯಿಸುತ್ತಿದ್ದಾರೆ ಎಂದಿದ್ದಾನೆ. ಹೀಗಾಗಿ ನನ್ನನ್ನು ಹಾಗೂ ನನ್ನ ಪತ್ನಿಯನ್ನು ನವದೆಹಲಿ ಜೈಲು ಹೊರತುಪಡಿಸಿ ದೇಶದ ಇತರೆ ಜೈಲುಗಳಲ್ಲಿ ಇರಿಸುವಂತೆ ಆತ ಮನವಿ ಮಾಡಿದ್ದಾನೆ.