ಅಹಮದಾಬಾದ್: ಗುಜರಾತ್ ವ್ಯಕ್ತಿಯೊಬ್ಬನಿಗೆ ಆತನಿಗೆ ಗೊತ್ತೇ ಇಲ್ಲದಂತೆ ಖಾತೆಗೆ 11,677 ಕೋಟಿ ರೂ. ಜಮಾ ಮಾಡಲಾಗಿದೆ. ಒಂದು ದಿನಕ್ಕೆ ಸಹಸ್ರ ಕೋಟ್ಯಾಧಿಪತಿಯಾಗಿದ್ದ ಆತನ ಸಂತೋಷ ಒಂದೇ ದಿನದಲ್ಲಿ ಮರೆಯಾಗಿದೆ.
ಗುಜರಾತ್ ನ ಅಹಮದಾಬಾದ್ ನಲ್ಲಿ ಘಟನೆ ನಡೆದಿದೆ. ರಮೇಶ್ ಸಾಗರ್ ಎಂಬಾತನ ಡಿಮ್ಯಾಟ್ ಖಾತೆಯಲ್ಲಿ 11,677 ಕೋಟಿ ರೂ.(116,77,24,43,277.10) ಜಮಾ ಆಗಿದೆ. ಕೆಲವೇ ಗಂಟೆಗಳಲ್ಲಿ ಭಾರಿ ಮೊತ್ತದ ಹಣವನ್ನು ಹಿಂತೆಗೆದುಕೊಂಡಿದ್ದರಿಂದ ಆತನ ಸಂತೋಷ ಅಲ್ಪಕಾಲಿಕವಾಗಿತ್ತು.
ಕಳೆದ ಐದಾರು ವರ್ಷಗಳಿಂದ ರಮೇಶ್ ಸಾಗರ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ ಅವರು ಕೋಟಾಕ್ ಸೆಕ್ಯುರಿಟೀಸ್ ನಲ್ಲಿ ತಮ್ಮ ಡಿಮ್ಯಾಟ್ ಖಾತೆ ತೆರೆದಿದ್ದರು. ಒಂದು ತಿಂಗಳ ಹಿಂದೆ ಸಾಗರ್ ಖಾತೆಯಲ್ಲಿ 116,77,24,43,277.10 ರೂ. ಜಮಾ ಆಗಿರುವುದು ಗೊತ್ತಾಗಿ ಆತನಿಗೆ ಆಘಾತವಾಗಿತ್ತು. ಎಂಟು ಗಂಟೆಗಳಿಗೂ ಹೆಚ್ಚು ಕಾಲ ಅವರ ಖಾತೆಯಲ್ಲಿ ಹಣ ಇತ್ತು.
ಜುಲೈ 26, 2022 ರಂದು, ನಾನು ನನ್ನ ಖಾತೆಯಲ್ಲಿ 116,77,24,43,277.10 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದ್ದೇನೆ. ಅದರಲ್ಲಿ ನಾನು ಎರಡು ಕೋಟಿ ರೂಪಾಯಿಗಳನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದೇನೆ. ಐದು ಲಕ್ಷ ರೂಪಾಯಿಗಳ ಲಾಭವನ್ನು ಕಾಯ್ದಿರಿಸಿದ್ದೇನೆ. ಅದೇ ಸಂಜೆ ಸುಮಾರು 8 ರಿಂದ 8.30 ರವರೆಗೆ ಬ್ಯಾಂಕ್ ಮೊತ್ತವನ್ನು ಹಿಂತೆಗೆದುಕೊಂಡಿತು. ಬ್ಯಾಂಕ್ ನಿಂದ ಹಣ ಜಮಾ ಆದ ಅಧಿಸೂಚನೆ ಸ್ವೀಕರಿಸಿದ್ದಾಗಿ ಅವರು ತಿಳಿಸಿದ್ದಾರೆ. ತಾಂತ್ರಿಕ ದೋಷ ಇಲ್ಲವೇ ಸಿಬ್ಬಂದಿ ಎಡವಟ್ಟಿನಿಂದ ಈ ರೀತಿ ಆಗಿರಬಹುದು ಎಂದು ಹೇಳಲಾಗಿದೆ.