ಬೆಂಗಳೂರು: ರಾಜ್ಯಾದ್ಯಂತ ಅಕಾಲಿಕ ಮಳೆಯಿಂದ ಕೃಷಿ ಬೆಳೆ, ಉತ್ಪನ್ನಗಳು ಹಾಳಾಗಿದ್ದು, ಸರ್ಕಾರ ಬೆಳೆ ಹಾನಿ ಸಮೀಕ್ಷೆ ನಡೆಸಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ವಿತರಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ರಾಜ್ಯಾದ್ಯಂತ ಅಕಾಲಿಕ ಮಳೆಯಾದ ಪರಿಣಾಮ ಅನೇಕ ಜಿಲ್ಲೆಗಳಲ್ಲಿ ಬೆಳೆದಿದ್ದ ಆಹಾರ ಧಾನ್ಯಗಳು, ಬೇಳೆ ಕಾಳುಗಳು, ಎಣ್ಣೆ ಕಾಳುಗಳು, ವಾಣಿಜ್ಯ ಬೆಳೆಗಳು, ತರಕಾರಿ, ಹೂವು ಸೇರಿದಂತೆ ಅನೇಕ ಬೆಳೆಗಳು ನಾಶವಾಗಿವೆ ಎಂದು ತಿಳಿಸಿದ್ದಾರೆ.
ಈ ವರ್ಷವಾದರೂ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಬರ ಪರಿಸ್ಥಿತಿ ಇದ್ದಾಗ ಸರಿಯಾದ ಸಮಯಕ್ಕೆ ಸಮೀಕ್ಷೆ ನಡೆಸದೇ ರಾಜಕೀಯ ಮಾಡುವುದರಲ್ಲಿ ರಾಜ್ಯ ಸರ್ಕಾರ ಕಾಲಹರಣ ನಡೆಸಿದ್ದು, ಈ ಬಾರಿಯಾದರೂ ಸರಿಯಾದ ಸಮಯಕ್ಕೆ ಬೆಳೆ ಹಾನಿ ಸಮೀಕ್ಷೆ ನಡೆಸಿ ಸಕಾಲಕ್ಕೆ ರೈತರಿಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.