ಬೆಂಗಳೂರು: ರೈತರ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ಮೊತ್ತ ಜಮಾ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದಾಗಿ ಬೆಳೆ ಹಾನಿ ಒಳಗಾದ 38,78,525 ರೈತರಿಗೆ 3535.30 ಕೋಟಿ ರೂ.ಗಳನ್ನು, ಹಿಂಗಾರು ಹಂಗಾಮಿನಲ್ಲಿ ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಅತಿ ಮಳೆಯಿಂದ ಉಂಟಾದ ಬೆಳೆ ಹಾನಿಗೆ 4859 ರೈತರಿಗೆ 5.66 ಕೋಟಿ ರೂ. ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2023- 24ನೇ ಸಾಲಿನಲ್ಲಿ ಅತಿ ಹೆಚ್ಚು ಪರಿಹಾರ ನೀಡಲಾಗಿದೆ. ಸುಪ್ರೀಂಕೋರ್ಟ್ ಗೆ ಹೋದ ಬಳಿಕ ಕೇಂದ್ರ ಸರ್ಕಾರ 3454.22 ಕೋಟಿ ರೂ. ಬಿಡುಗಡೆ ಮಾಡಿದ್ದು, ಇದರಲ್ಲಿ 3266 ಕೋಟಿ ರೂ.ಗಳನ್ನು ಬೆಳೆ ಹಾನಿ ಪರಿಹಾರವಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ.