ಬೆಂಗಳೂರು: ರಾಜ್ಯದ ರೈತರಿಗೆ ಎರಡು ದಿನದಲ್ಲಿ ಬೆಳೆಹಾನಿಗೆ ಹೆಚ್ಚುವರಿ ಪರಿಹಾರ ನೀಡಲಾಗುತ್ತದೆ. 18.2 ಲಕ್ಷ ರೈತರಿಗೆ 1200 ಕೋಟಿ ರೂಪಾಯಿ ಬಿಡುಗಡೆಗೆ ಸರ್ಕಾರ ಸಿದ್ಧತೆ ಕೈಗೊಂಡಿದ್ದು, ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ.
ಹಾನಿಯಾದ ಬೆಳೆಗಳಿಗೆ ಡಬಲ್ ಪರಿಹಾರ ನೀಡಲಾಗುತ್ತದೆ. ರಾಜ್ಯ ಸರ್ಕಾರ ಬೆಳೆಹಾನಿಗೆ ಹೆಚ್ಚುವರಿ ಪರಿಹಾರ ಘೋಷಿಸಿದ್ದು, ಇದರ ಹಂಚಿಕೆ ಇನ್ನು ಎರಡು-ಮೂರು ದಿನಗಳಲ್ಲಿ ಆಗಲಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಭಾರಿ ಮಳೆಯಿಂದಾಗಿ 14 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 18.2 ಲಕ್ಷ ರೈತರು ನಷ್ಟ ಅನುಭವಿಸಿದ್ದರು. ಇವರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳಂತೆ ನೀರಾವರಿ ಜಮೀನಿಗೆ ಪ್ರತಿ ಹೆಕ್ಟೇರ್ ಗೆ 13,500 ರೂಪಾಯಿ, ತೋಟಗಾರಿಕೆ ಬೆಳೆಗೆ ಪ್ರತಿ ಹೆಕ್ಟೇರಿಗೆ 18 ಸಾವಿರ ರೂಪಾಯಿ, ಒಣಬೇಸಾಯ ಭೂಮಿಗೆ ಒಂದು ಹೆಕ್ಟೇರ್ ಗೆ 6800 ರೂಪಾಯಿ ಪರಿಹಾರ ನೀಡಲಾಗಿತ್ತು.
ಇದು ಸಾಕಾಗುವುದಿಲ್ಲ ಎಂಬ ಕಾರಣಕ್ಕೆ ರೈತರ ಬೇಡಿಕೆ ಅನ್ವಯ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಹೆಚ್ಚುವರಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ಅಧಿವೇಶನದಲ್ಲಿ ಭರವಸೆ ನೀಡಿದ್ದರು.
ಈಗ ಒಣಬೇಸಾಯ ಭೂಮಿಗೆ ಒಂದು ಹೆಕ್ಟೇರ್ ಗೆ 13,600 ರೂ. ಪರಿಹಾರ ನೀಡಲಾಗುವುದು. ನೀರಾವರಿ ಜಮೀನಿಗೆ ಹೆಕ್ಟೇರ್ ಗೆ 11,500 ರೂ. ಸೇರಿಸಿ 25,000 ರೂ. ಪರಿಹಾರ ನೀಡಲಾಗುವುದು. ತೋಟಗಾರಿಕೆ ಬೆಳೆಗೆ 10,000 ರೂ. ಸೇರಿಸಿ 28,000 ರೂ. ಪರಿಹಾರ ನೀಡಲಾಗುತ್ತದೆ. ಹೆಚ್ಚುವರಿ ಪರಿಹಾರಕ್ಕೆ 1200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಎರಡು-ಮೂರು ದಿನಗಳಲ್ಲಿ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.