ಬೆಂಗಳೂರು: ಹೊಲದಲ್ಲಿ ಹಾನಿಯಾದ ಬೆಳೆಗಳನ್ನು ಮಾತ್ರ ಪರಿಹಾರಕ್ಕೆ ಪರಿಗಣಿಸಲಾಗುತ್ತದೆ. ಕಟಾವು ಮಾಡಿ ಕಣದಲ್ಲಿ ಹಾಳಾದ ಬೆಳೆಗಳಿಗೆ ಸರ್ಕಾರದ ಪರಿಹಾರ ಸಿಗುವುದಿಲ್ಲ ಎಂದು ಹೇಳಲಾಗಿದ್ದು, ಮೊದಲೇ ಸಂಕಷ್ಟದಲ್ಲಿ ರೈತರಿಗೆ ಮತ್ತೊಂದು ಆಘಾತ ಎದುರಾಗಿದೆ.
ರಾಜ್ಯದಲ್ಲಿ ಕಳೆದ ವಾರ ಸುರಿದ ಭಾರಿ ಪ್ರಮಾಣದ ಅಕಾಲಿಕ ಮಳೆಯಿಂದಾಗಿ ಫಸಲು ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭತ್ತ, ಮೆಕ್ಕೆ ಜೋಳ ಸೇರಿದಂತೆ ಅನೇಕ ಬೆಳೆಗಳು ಕೊಯ್ಲಿಗೆ ಬಂದಿದ್ದು, ಅನೇಕ ರೈತರು ಕೊಯ್ಲು ಮಾಡಿ ರಾಶಿ ಮಾಡಲು ಕಣದಲ್ಲಿ, ಖಾಲಿ ಜಾಗಗಳಲ್ಲಿ ಬೆಳೆ ಹಾಕಿದ್ದಾರೆ. ಆದರೆ, ಭಾರೀ ಮಳೆಯ ಕಾರಣ ಕಣದಲ್ಲಿ ಬೆಳೆ ಕೊಳೆತು ಹೋಗಿದೆ. ಇಂತಹ ಬೆಳೆಗಳಿಗೆ ಪರಿಹಾರ ನೀಡಲು ವಿಪತ್ತು ಪರಿಹಾರ ನಿಯಮದಲ್ಲಿ ಅವಕಾಶವಿಲ್ಲವೆಂದು ಹೇಳಲಾಗಿದೆ.
ಇಂತಹ ನಿಯಮದಿಂದಾಗಿ ಕಣದಲ್ಲೇ ಬೆಳೆ ಕಳೆದುಕೊಂಡ ರೈತರಿಗೆ ಆಘಾತ ಎದುರಾಗಿದೆ. NDRF ಮತ್ತು SDRF ನಿಯಮದ ಅನುಸಾರ ಜಮೀನಿನಲ್ಲಿ ಬೆಳೆ ಹಾನಿಯಾಗಿರುವುದನ್ನು ಸಮೀಕ್ಷೆ ಮಾಡಲಾಗುತ್ತದೆ. ಕಣದಲ್ಲಿ ಹಾಳಾದ ಬೆಳೆಯ ಲೆಕ್ಕಾಚಾರ ಮಾಡಿ ಪರಿಹಾರ ನೀಡಲು ಅವಕಾಶವಿಲ್ಲ ಎಂದು ಹೇಳಲಾಗಿದೆ.
ಈ ಕಾರಣದಿಂದ ಬೆಳೆಗೆ ಪರಿಹಾರ ಸಿಗುವುದಿಲ್ಲ. ಈ ನಿಯಮದಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊಯ್ಲು ಮಾಡಿದ ಮೆಕ್ಕೆಜೋಳ, ಈರುಳ್ಳಿ, ಮೆಣಸಿನಕಾಯಿ ಮೊದಲಾದ ಬೆಳೆಗಳನ್ನು ಕೊಯ್ಲು ಮಾಡಿ ಕಣದಲ್ಲಿ ಹಾಕಿದ್ದು, ಭಾರೀ ಮಳೆಯ ಕಾರಣ ತೇವಗೊಂಡ ಬೆಳೆ ಹಾಳಾಗಿ ಮೊಳಕೆ ಬಂದಿವೆ. ಕೊಳೆತು ಹೋಗಿವೆ. ಇಂತಹ ರೈತರಿಗೆ ಪರಿಹಾರ ಸಿಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.
ಜಮೀನಿನಲ್ಲಿ ಹಾಳಾದ ಬೆಳೆಗಳ ಜೊತೆಗೆ ಕಟಾವು ಮಾಡಿ ಕಣದಲ್ಲಿ ಹಾಳಾದ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯ ಕೇಳಿಬಂದಿದೆ.