ಕಲಬುರಗಿ: ರಾಜ್ಯದಲ್ಲಿ ಮಳೆ ಕೊರತೆ ಹಿನ್ನಲೆಯಲ್ಲಿ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಮುಂದಿನ ವಾರ ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ವಿಭಾಗದ ಬೀದರ್, ಕಲಬುರಗಿ, ಯಾದಗಿರಿ, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಕೃಷಿ ಅಧಿಕಾರಿಗಳೊಂದಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರ ತಂಡಕ್ಕೆ ಬೆಳೆ ಹಾನಿ ಮತ್ತು ಬರಗಾಲದ ವಾಸ್ತವ ಸ್ಥಿತಿ ಬಗ್ಗೆ ಮನವರಿಕೆ ಮಾಡಿ ಕೊಡುವ ಕೆಲಸವನ್ನು ಕೃಷಿ ಅಧಿಕಾರಿಗಳು ಸಮರ್ಥವಾಗಿ ಮಾಡಬೇಕೆಂದು ತಿಳಿಸಿದ್ದಾರೆ.
ಸರಿಯಾದ ಸಮಯಕ್ಕೆ ಮಳೆಯಾಗದ ಕಾರಣ ಬೆಳೆ ಹಾಳಾಗಿದೆ. ಅಧ್ಯಯನ ತಂಡ ಬರುವ ಮೊದಲೇ ಸರ್ವೆ ಕಾರ್ಯ ಪೂರ್ಣಗೊಳಿಸಿ ವಾಸ್ತವ ಸ್ಥಿತಿ ಮನವರಿಕೆ ಮಾಡಬೇಕು. ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.