ನವದೆಹಲಿ: ಜನವರಿ 26 ರ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರ ಕೆಂಪುಕೋಟೆ ಮೇಲೆ ಧ್ವಜ ಹಾರಿಸಿದ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ನಲ್ಲಿ ಪ್ರಸ್ತಾಪಿಸಿದ್ದಾರೆ.
ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನ ನಡೆದ ಹಿಂಸಾಚಾರ, ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನದಿಂದ ದೇಶ ದುಂಖಿತವಾಗಿದೆ. ಇದರಿಂದ ದೇಶದ ಜನತೆಗೆ ನೋವಾಗಿದೆ. ಇಂತಹ ಘಟನೆಯನ್ನು ಸಹಿಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಇದೊಂದು ಮೊಸಳೆ ಕಣ್ಣೀರು ಹೇಳಿಕೆ. ಇಂತಹ ಹೇಳಿಕೆಯನ್ನು ನಿಲ್ಲಿಸಿ ಎಂದು ಒತ್ತಾಯಿಸಿದ್ದಾರೆ.
ಸ್ವಾತಂತ್ರ್ಯನಂತರದಲ್ಲಿ ದಶಕಗಳವರೆಗೆ ರಾಷ್ಟ್ರಧ್ವಜ ಹಾರಿಸಲು ನಿರಾಕರಿಸಿದ ಆರೆಸ್ಸೆಸ್ ನೊಂದಿಗೆ ಸಂಬಂಧವನ್ನು ಹೊಂದಿರುವ ಮೋದಿಗೆ ಆವಾಗ ಏಕೆ ಆಘಾತವಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆದ ಘಟನೆಗೆ ಕಾರಣರು ಯಾರು? ದೀಪ್ ಸಿದ್ದು ಯಾರು? ಆತನಿಗೆ ಕೆಂಪುಕೋಟೆಯವರೆಗೆ ಬರಲು ಹೇಗೆ ಅವಕಾಶ ನೀಡಲಾಯಿತು? ಇಷ್ಟೆಲ್ಲಾ ನಡೆಯುವಾಗ ದೆಹಲಿ ಪೊಲೀಸರು ಏನು ಮಾಡುತ್ತಿದ್ದರು? ಘಟನೆ ನಂತರ ದೀಪ್ ಸಿದ್ದು ಎಲ್ಲಿದ್ದಾನೆ? ಪ್ರಶ್ನೆಗಳ ಬಾಣಗಳನ್ನೆಸೆದ ದಿಗ್ವಿಜಯ್ ಸಿಂಗ್ ಈಗ ಮರುಳು ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಪ್ರಧಾನಿಯವರಿಗೆ ಒತ್ತಾಯಿಸಿದ್ದಾರೆ.