ಖ್ಯಾತ ಫುಟ್ಬಾಲ್ ಆಟಗಾರ ಪೋರ್ಚಗಲ್ ನ ಕ್ರಿಸ್ಟಿಯಾನೋ ರೊನಾಲ್ಡೋ, ಸೌದಿ ಅರೇಬಿಯಾದ Al Nasar ತಂಡದೊಂದಿಗೆ ಎರಡೂವರೆ ವರ್ಷಗಳ ಕಾಲ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕಾಗಿ ಬರೋಬ್ಬರಿ 75 ಮಿಲಿಯನ್ ಅಮೆರಿಕನ್ ಡಾಲರ್ ಪಡೆಯಲಿದ್ದಾರೆ.
ಡಿಸೆಂಬರ್ 30ರಂದು ಉಭಯತ್ರರು ಈ ಒಪ್ಪಂದಕ್ಕೆ ಸಹಿ ಮಾಡಿದ್ದು, ರೊನಾಲ್ಡೋ ತಮ್ಮ ಬಹುಕಾಲದ ಗೆಳತಿ ಅರ್ಜೆಂಟೈನಾದ ಮಾಡೆಲ್ ಜಾರ್ಜಿನಾ ರೋಡ್ರಿಗಸ್ ಜೊತೆ ಸೌದಿ ಅರೇಬಿಯಾಕ್ಕೆ ಬಂದಿಳಿದಿದ್ದಾರೆ.
ಇದರ ಬೆನ್ನಲ್ಲೇ ಈಗ ರೊನಾಲ್ಡೋ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸೌದಿ ಅರೇಬಿಯಾದ ಕಾನೂನಿನ ಪ್ರಕಾರ ಅವಿವಾಹಿತ ಜೋಡಿ ಒಟ್ಟಿಗೆ ವಾಸ ಮಾಡುವಂತಿಲ್ಲ. ಆದರೆ ರೊನಾಲ್ಡೋ ಹಾಗೂ ಜಾರ್ಜಿನಾ ದೀರ್ಘಕಾಲದಿಂದ ಸಂಬಂಧದಲ್ಲಿದ್ದರೂ ಸಹ ವಿವಾಹವಾಗಿಲ್ಲ.
ಹೀಗಾಗಿ ಸೌದಿ ಅರೇಬಿಯಾದ ಕಾನೂನಿನ ಪ್ರಕಾರ ರೊನಾಲ್ಡೋ ಶಿಕ್ಷೆಗೊಳಗಾಗಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಆದರೆ ಕೆಲವೊಂದು ಮೂಲಗಳ ಪ್ರಕಾರ ರೊನಾಲ್ಡೋ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆ ಇಲ್ಲವೆನ್ನಲಾಗಿದೆ.