ಬೆಂಗಳೂರು: ಕ್ರಿಮಿನಲ್ ಕೇಸ್ ಇದ್ದರೂ ಪಾಸ್ ಪೋರ್ಟ್ ನವೀಕರಣಕ್ಕೆ ಕೋರ್ಟ್ ಒಪ್ಪಿಗೆ ಬೇಕಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಪಾಸ್ಪೋರ್ಟ್ ನವೀಕರಣಕ್ಕೆ ಅರ್ಜಿ ಸಲ್ಲಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಬಾಕಿ ಇದ್ದಲ್ಲಿ ನವೀಕರಣಕ್ಕೆ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ಅನುಮತಿ ಪಡೆಯುವ ಅಗತ್ಯವಿಲ್ಲವೆಂದು ಹೈಕೋರ್ಟ್ ಆದೇಶಿಸಿದೆ.
ಉದ್ಯಮಿ ಹಾಗೂ ಮಾಜಿ ಶಾಸಕ ಅಶೋಕ ಖೇಣಿ ಅವರ ಸಹೋದರ ಸಂಜಯ್ ಖೇಣಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವವಿತ್ ಶೆಟ್ಟಿ ಅವರ ಪೀಠ ಈ ಆದೇಶ ನೀಡಿದೆ. ಪಾಸ್ಪೋರ್ಟ್ ಗೆ ಹೊಸದಾಗಿ ಅರ್ಜಿ ಸಲ್ಲಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದ್ದರೆ ಮಾತ್ರ ಅರ್ಜಿದಾರರು ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪಾಸ್ಪೋರ್ಟ್ ನವೀಕರಣಕ್ಕೆ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಅವರಿಂದ ಅನುಮತಿ ಪಡೆಯುವಂತೆ ಅರ್ಜಿದಾರರಿಗೆ ಬೆಂಗಳೂರಿನ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ 2021 ರ ಜನವರಿ 12 ಮತ್ತು ಮಾರ್ಚ್ 11ರಂದು ಆದೇಶ ಹೊರಡಿಸಿದ್ದು, ಈ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.