ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಮೇಲಿರುವ ಕ್ರಿಮಿನಲ್ ಕೇಸ್ ಗಳ ಕುರಿತು ಮಾಹಿತಿ ಬಹಿರಂಗಪಡಿಸಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಪಾಲಿಸಲೇಬೇಕು ಎಂದು ರಾಜ್ಯ ಚುನಾವಣಾ ಆಯೋಗ ಮತ್ತು ಅದರ ಪ್ರಾಧಿಕಾರಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕ್ರಿಮಿನಲ್ ಕೇಸ್ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಆಯ್ಕೆಯನ್ನು ರದ್ದುಪಡಿಸಿದ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ತೀರ್ಪು ಪುರಸ್ಕರಿಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯ ಪೀಠದ ತೀರ್ಪು ಪ್ರಶ್ನಿಸಿ ಕೆ.ವಿ. ಅಶೋಕ್ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗಿಯ ಪೀಠದಿಂದ ಈ ನಿರ್ದೇಶನ ನೀಡಲಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಮೇಲೆ ಇರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿ ಬಹಿರಂಗಪಡಿಸಬೇಕು. ಮಾಹಿತಿ ಬಹಿರಂಗಪಡಿಸಲು ಅಭ್ಯರ್ಥಿಗಳಿಗೆ ಚುನಾವಣೆ ಆಯೋಗದಿಂದ ನೀಡಿರುವ ಫಾರ್ಮ್ ಅನ್ನು ಅಭ್ಯರ್ಥಿಗಳು ಭರ್ತಿ ಮಾಡಬೇಕು ಎಂದು ನ್ಯಾಯಪೀಠ ಹೇಳಿದೆ. ಈ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಚುನಾವಣಾ ಆಯೋಗ ಪಾಲಿಸಬೇಕೆಂದು ತಿಳಿಸಲಾಗಿದೆ.