ಬೆಂಗಳೂರು: ಸೈಲೆಂಟ್ ಸುನೀಲ, ಫೈಟರ್ ರವಿ ಸೇರಿ ಹಲವು ಕ್ರಿಮಿನಲ್ ಗಳಿಗೆ ಬಿಜೆಪಿ ಟಿಕೆಟ್ ನೀಡಲು ಮುಂದಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಆರೋಪಿಸಿದ್ದಾರೆ.
ಸೈಲೆಂಟ್ ಸುನಿಲ, ಫೈಟರ್ ರವಿ, ಶೀಧರ್ ರೆಡ್ಡಿ ಅಂತಹವರನ್ನು ರಾಜಕಾರಣಕ್ಕೆ ಪರಿಚಯಿಸಿ ಅಭ್ಯರ್ಥಿಗಳನ್ನಾಗಿ ಮಾಡಲು ಬಿಜೆಪಿ ಹೊರಟಿದೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದವನ್ನು ರಾಜಕಾರಣಕ್ಕೆ ಪರಿಚಯಿಸಿ ಬಿಜೆಪಿ ಕೆಟ್ಟ ಪರಂಪರೆಗೆ ನಾಂದಿ ಹಾಡುತ್ತಿದೆ. ಶ್ರೀಧರ ರೆಡ್ಡಿ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ 12 ಕೇಸ್ ಗಳಿದ್ದು, ಶ್ರೀಧರ್ ರೆಡ್ಡಿ ಸ್ಪರ್ಧೆಗೆ ಬಿಜೆಪಿ ಟಿಕೆಟ್ ನೀಡಿದರೆ ನಾಮಪತ್ರ ತಿರಸ್ಕರಿಸಲು ದಾಖಲೆ ಸಹಿತ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಆಡಳಿತ ಪಕ್ಷ ಬಿಜೆಪಿಯ 40 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಬಿಜೆಪಿಯ ಶೇಕಡ 35 ರಷ್ಟು ಶಾಸಕರು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ರೌಡಿಶೀಟರ್ ಗಳನ್ನು ಬಿಜೆಪಿಗೆ ಸೇರಿಸಿಕೊಂಡು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವವರ ರಕ್ಷಣೆಗೆ ಪಕ್ಷ ಮುಂದಾಗಿದೆ ಎಂದು ಟೀಕಿಸಿದ್ದಾರೆ.