ನೋ ಪಾರ್ಕಿಂಗ್, ಓವರ್ ಸ್ಪೀಡ್, ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದೂ ಸೇರಿದಂತೆ ಟ್ರಾಫಿಕ್ ನಿಯಮಗಳ ಉಲ್ಲಂಘನೆ ಮಾಡಿದ ವೇಳೆ ಅಂತಹ ಸವಾರರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ. ಆದರೆ ವಾಹನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲ್ ಇಲ್ಲವೆಂಬ ಕಾರಣಕ್ಕೆ ಚಲನ್ ನೀಡಿದರೆ….! ಹೌದು, ಇಂಥದೊಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೇರಳದಲ್ಲಿ ಈ ಘಟನೆ ನಡೆದಿದ್ದು ಅಲ್ಲಿನ ಪಕಟ್ಟಪಡಿ ಎಂಬಲ್ಲಿ ಬಾಸಿಲ್ ಶಾಮ್ ಎಂಬವರು ತಮ್ಮ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಮೋಟಾರ್ ಬೈಕ್ ನಲ್ಲಿ ಹೋಗುತ್ತಿದ್ದರು. ಕಚೇರಿಗೆ ತುರ್ತಾಗಿ ಹೋಗುವ ಅವಶ್ಯಕತೆ ಇದ್ದ ಕಾರಣ ಅವರು ಒನ್ ವೇ ನಲ್ಲಿ ತಮ್ಮ ವಾಹನ ಚಲಾಯಿಸಿದ್ದಾರೆ. ಈ ವೇಳೆ ವಾಹನ ತಡೆದ ಪೊಲೀಸರು ಅವರಿಗೆ ಚಲನ್ ನೀಡಿದ್ದಾರೆ.
ಕಚೇರಿಗೆ ತೆರಳಿದ ಬಳಿಕ ಬಾಸಿಲ್ ತಮಗೆ ನೀಡಿದ್ದ ಚಲನ್ ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಜುಲೈ 22ರ ದಿನಾಂಕದ ಈ ಚಲನ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಂಧನವಿಲ್ಲದೆ ವಾಹನ ಚಲಾಯಿಸಿದ್ದಕ್ಕಾಗಿ ರೂ.250 ದಂಡ ಎಂದು ನಮೂದಿಸಲಾಗಿದೆ. ಬಳಿಕ ಕೆಲವು ವಕೀಲರುಗಳನ್ನು ಸಂಪರ್ಕಿಸಿದ ವೇಳೆ ಈ ರೀತಿ ದಂಡ ವಿಧಿಸಲು ಸಾಧ್ಯವಿಲ್ಲವೆಂಬ ಸಂಗತಿ, ಬಾಸಿಲ್ ಅವರಿಗೆ ಮನವರಿಕೆಯಾಗಿದೆ.
ಆಮೇಲೆ ಈ ವಿಷಯವನ್ನು ನೋಡಿದರಾಯಿತು ಎಂದು ಬಾಸಿಲ್ ತಮಗೆ ನೀಡಿದ್ದ ಚಲನ್ ಅನ್ನು ತಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿ ಅದನ್ನು ಮರೆತುಬಿಟ್ಟಿದ್ದಾರೆ. ಆದರೆ ಅವರು ಮಾರನೇ ದಿನ ಬೆಳಿಗ್ಗೆ ಎದ್ದು ನೋಡಿದಾಗ ಇದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು ಗೊತ್ತಾಗಿದೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ಚಲನ್ ಚರ್ಚೆಯನ್ನೇ ಹುಟ್ಟುಹಾಕಿರುವುದು ಕಂಡುಬಂದಿದೆ.
ಬಾಸಿಲ್ ಅವರ ವಾಟ್ಸಾಪ್ ಸ್ಟೇಟಸ್ ನಲ್ಲಿದ್ದ ಚಲನ್ ಫೋಟೋವನ್ನು ಕಾಪಿ ಮಾಡಿಕೊಂಡಿದ್ದ ಯಾರೋ ಒಬ್ಬರು ಅದನ್ನು ವೈರಲ್ ಮಾಡಿದ್ದಾರೆ. ಇದು ಬಳಿಕ ಕ್ಷಣಾರ್ಧದಲ್ಲಿ ಎಲ್ಲೆಡೆಯೂ ಹರಿದಾಡಿದೆ. ವಾಸ್ತವ ಸಂಗತಿ ಎಂದರೆ ಬಾಸಿಲ್, ಒನ್ ವೇ ನಲ್ಲಿ ತಮ್ಮ ವಾಹನ ಚಲಾಯಿಸಿದ್ದಕ್ಕೆ ದಂಡ ವಿಧಿಸಲಾಗಿದ್ದು, ಆದರೆ ಪೊಲೀಸ್ ಸಿಬ್ಬಂದಿಯ ತಪ್ಪಿನಿಂದಾಗಿ ಅದು ಇಂಧನವಿಲ್ಲದ ಕಾರಣಕ್ಕೆ ದಂಡ ಎಂದಾಗಿದೆ. ಹೀಗಾಗಿ ಈ ಚಲನ್ ವೈರಲ್ ಆಗಿದೆ.