
ಬೆಂಗಳೂರು: ಟಿ20 ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ದಂಧೆಕೋರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದೀಪಾಂಜಲಿ ನಗರದ ರಾಘವೇಂದ್ರ(35) ಬಂಧಿತ ಆರೋಪಿ. ಆತನಿಂದ 3 ಲಕ್ಷ ರೂ ನಗದು, ಒಂದು ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.
ಶುಕ್ರವಾರ ನಡೆದ ಭಾರತ – ಆಸ್ಟ್ರೇಲಿಯಾ ಟಿ20 ಪಂದ್ಯದ ಸೋಲು, ಗೆಲುವು ಕುರಿತು ಜನರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಜೂಜಾಡಿಸುತ್ತಿದ್ದ ಆರೋಪಿ ದೀಪಾಂಜಲಿ ನಗರದ ಒಂದನೇ ಮುಖ್ಯರಸ್ತೆ 8ನೇ ಅಡ್ಡರಸ್ತೆಯ ಗೌರಮ್ಮ ಎಂಬುವರ ಮನೆ ಬಳಿ ಗೆದ್ದವರಿಗೆ ಹಣ ನೀಡಲು ಮತ್ತು ಸೋತವರಿಂದ ಹಣ ಸಂಗ್ರಹಿಸಲು ಬಂದಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.