ವಿಜಯಪುರ: ದಲಿತ ಸಮುದಾಯದವರ ಸ್ಮಶಾನಕ್ಕೆ ಸ್ಥಳಾವಕಾಶ ಇಲ್ಲದ ಕಾರಣ ಮನೆ ಮುಂದೆಯೇ ಮೃತರೊಬ್ಬರ ಅಂತ್ಯಸಂಸ್ಕಾರ ನಡೆಸಿದ ಘಟನೆ ವಿಜಯಪುರದ ನಾಲತವಾಡ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದಲ್ಲಿ 700ಕ್ಕೂ ಅಧಿಕ ದಲಿತ ಕುಟುಂಬಗಳಿದ್ದು, ಸುಮಾರು 50 ವರ್ಷಗಳಿಂದ ಶವ ಸಂಸ್ಕಾರಕ್ಕೆ ಸ್ಥಳಾವಕಾಶ ಇಲ್ಲದೆ ತೊಂದರೆ ಆಗಿದೆ. ಮನೆಯ ಅಕ್ಕ-ಪಕ್ಕದ ಜಾಗ, ಹಳ್ಳಗಳೇ ಸ್ಮಶಾನದ ಸ್ಥಳಗಳಾಗಿವೆ. ಸ್ಮಶಾನಕ್ಕೆ ಜಾಗ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ.
ನಾಲತವಾಡ ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಇದ್ದರೂ ಸ್ಮಶಾನಕ್ಕೆ ಸ್ಥಳ ನೀಡುತ್ತಿಲ್ಲ ಎಂದು ದಲಿತರು ಆರೋಪಿಸಿದ್ದಾರೆ. ಸ್ಮಶಾನಕ್ಕೆ ಜಾಗ ಮಂಜೂರು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳ ಸುತ್ತಮುತ್ತಲಿರುವ ಖಾಲಿ ಜಾಗದಲ್ಲಿ ಶವ ಹೂಳಲಾಗುವುದು ಎಂದು ದಲಿತರು ಎಚ್ಚರಿಕೆ ನೀಡಿದ್ದಾರೆ.