
ಧಾರವಾಡ: 2023 ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ SDRF ಅಥವಾ NDRF ಮಾರ್ಗಸೂಚಿಯಂತೆ ಅರ್ಹತೆಯ ಅನುಗುಣವಾಗಿ ಈಗಾಗಲೇ ಅರ್ಹ ರೈತರಿಗೆ ಗರಿಷ್ಟ 2 ಸಾವಿರ ರೂ.ಗಳವರೆಗೆ ಪಾವತಿಸಿರುವ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶಿಸಿದೆ.
ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಹತ್ತು ಹಂತಗಳಲ್ಲಿ ಒಟ್ಟು 1.06,707 ರೈತರಿಗೆ 108.12 ಕೋಟಿ ರೂ.ಗಳ ಇನಪುಟ್ ಸಬ್ಸಿಡಿ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರ ಮೇಲೆ(FRUITS ID) ಪ್ರೂಟ್ಸ್ ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತ-ಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮೆ ಮಾಡಲಾಗಿದೆ. ಬಾಕಿ ಉಳಿದ ಅರ್ಹ ರೈತರಿಗೆ ಹಂತ ಹಂತವಾಗಿ ಪರಿಹಾರ ಪಾವತಿಸುವ ಕಾರ್ಯವು ಪ್ರಗತಿಯ ಹಂತದಲ್ಲಿದ್ದು ತುರ್ತಾಗಿ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಈಗಾಗಲೇ ಅನುಮೊದನೆ ನೀಡಿರುವ ರೈತರ ಮಾಹಿತಿಯ ಪಟ್ಟಿಯನ್ನು ನಾಡ ಕಚೇರಿಗಳು, ಗ್ರಾಮ ಪಂಚಾಯತಿಗಳು, ರೈತ ಸಂಪರ್ಕ ಕೇಂದ್ರಗಳು ಹಾಗೂ ತಹಶೀಲ್ದಾರ ಕಾರ್ಯಾಲಯದ ಸೂಚನಾ ಫಲಕದಲ್ಲಿ ಪ್ರಚುರಪಡಿಸಲಾಗಿದೆ.
ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು(FRUITS ID) ಪ್ರೂಟ್ಸ್ ಐಡಿ ಕಡ್ಡಾಯವಾಗಿರುವುದರಿಂದ ಇದುವರೆಗೂ ಪ್ರೂಟ್ಸ್ ಐಡಿ ಮಾಡಿಸಿಕೊಳ್ಳದೇ ಇರುವ ರೈತರು ನಿಗದಿತ ಅವಧಿಯಲ್ಲಿ ತಮ್ಮ ಆಧಾರ್, ಬ್ಯಾಂಕ್ ಖಾತೆಯ ವಿವರ ಹಾಗೂ ಪಹಣಿ ಮಾಹಿತಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ(FRUITS ID) ಪ್ರೂಟ್ಸ್ ಐಡಿ ಸೃಜಿಸಿಕೊಳ್ಳಬಹುದು. ಪ್ರೂಟ್ಸ್ ಐಡಿ ಇಲ್ಲದ ರೈತರು ಬೆಳೆ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲವೆಂದು ಅವರು ತಿಳಿಸಿದ್ದಾರೆ.