ಭಾರತದಲ್ಲಿ ಡಿಜಿಟಲ್ ಪಾವತಿಗೆ ಹೆಚ್ಚು ಪ್ರೋತ್ಸಾಹ ಸಿಗ್ತಿದೆ. ಕೊರೊನಾ ಸಂದರ್ಭದಲ್ಲಿ ಆನ್ಲೈನ್ ಪಾವತಿ ಹೆಚ್ಚಾಗಿದೆ. ಮಹಾ ನಗರಗಳಿಂದ ಹಿಡಿದು ಸಣ್ಣ ಪಟ್ಟಣದವರೆಗೆ ಎಲ್ಲರೂ ಈಗ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಕೆ ಮಾಡ್ತಿದ್ದಾರೆ. ಭಾರತದಲ್ಲಿ ಸುಮಾರು 64 ಮಿಲಿಯನ್ ಕ್ರೆಡಿಟ್ ಕಾರ್ಡ್ ಚಲಾವಣೆಯಲ್ಲಿವೆ.
ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ತಿಳಿದಿವುದು ಮುಖ್ಯ. ಅದರಲ್ಲಿ ಮುಖ್ಯವಾಗಿದ್ದು ಬಿಲ್ಲಿಂಗ್ ಸೈಕಲ್. ಈ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲನ್ನು ʼಸ್ಟೇಟ್‌ಮೆಂಟ್ ಸೈಕಲ್ʼ ಎಂದೂ ಕರೆಯುತ್ತಾರೆ. ಕ್ರೆಡಿಟ್ ಕಾರ್ಡ್ ಸಕ್ರಿಯಗೊಳಿಸಿದ ದಿನದಿಂದ ಬಿಲ್ಲಿಂಗ್ ಶುರುವಾಗುತ್ತದೆ. ಬಿಲ್ಲಿಂಗ್ ಸೈಕಲ್ ಅವಧಿ 28 ರಿಂದ 32 ದಿನಗಳವರೆಗೆ ಇರುತ್ತದೆ.
ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ಈ 28 ರಿಂದ 32 ದಿನಗಳ ಅವಧಿಯಲ್ಲಿ ನೀವು ಕ್ರೆಡಿಟ್ ಕಾರ್ಡ್ ಹೇಗೆ ಬಳಸಿದ್ದೀರಿ ಎಂಬುದರ ಕುರಿತು ಮಾಹಿತಿ ನೀಡುತ್ತದೆ. ನಿಮ್ಮ ವಹಿವಾಟು, ಕನಿಷ್ಠ ಬಾಕಿ ಮೊತ್ತ, ಅಂತಿಮ ದಿನಾಂಕ ಇತ್ಯಾದಿಗಳ ಮಾಹಿತಿ ಇದರಲ್ಲಿರುತ್ತದೆ. ಅಂತಿಮ ದಿನಾಂಕದ ಮೊದಲೇ ಬಿಲ್ ಪಾವತಿ ಮಾಡಬೇಕು. ದಿನಾಂಕದ ನಂತರ ಮಾಡಿದ ಪಾವತಿಗಳ ಮೇಲೆ ಎರಡು ವಿಧದ ಶುಲ್ಕ ವಿಧಿಸಲಾಗುತ್ತದೆ.
ಬಿಲ್ ಪಾವತಿ ತಡವಾದ್ರೆ, ಬಾಕಿ ಮೊತ್ತದ ಮೇಲೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ತಡವಾಗಿ ಪಾವತಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ನಲ್ಲಿ ಮೂರು ಮಿತಿಗಳಿರುತ್ತವೆ. ಒಟ್ಟು ಕ್ರೆಡಿಟ್ ಮಿತಿ, ಲಭ್ಯವಿರುವ ಕ್ರೆಡಿಟ್ ಮಿತಿ ಮತ್ತು ನಗದು ಮಿತಿ. ಹಾಗೆ ವಹಿವಾಟು ವಿಭಾಗದಲ್ಲಿ ಕ್ರೆಡಿಟ್ ಕಾರ್ಡ್ ಖಾತೆಗೆ ಎಷ್ಟು ಹಣ ಬಂದಿದೆ ಮತ್ತು ಎಷ್ಟು ಖರ್ಚಾಗಿದೆ ಎಂಬ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.
ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ನಲ್ಲಿ, ಇಲ್ಲಿಯವರೆಗೆ ಸಂಗ್ರಹವಾಗಿರುವ ರಿವಾರ್ಡ್ ಪಾಯಿಂಟ್‌ಗಳ ಸ್ಥಿತಿ ಕೂಡ ಇರುತ್ತದೆ.