ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರೇ ಮಲ್ಲಿಕಾರ್ಜುನ ಖರ್ಗೆ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ನವಜೋತ್ ಸಿಂಗ್ ಸಿಧು ಕೊಂಡಾಡಿದ್ದಾರೆ.
ರಸ್ತೆ ರಗಳೆ ಕೇಸ್ ನಲ್ಲಿ 10 ತಿಂಗಳ ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಜೈಲಿನಿಂದ ಬಿಡುಗಡೆಯಾಗಿರುವ ನವಜೋತ್ ಸಿಂಗ್ ಸಿಧು ಶುಕ್ರವಾರ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ “ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರು ಮಲ್ಲಿಕಾರ್ಜುನ ಖರ್ಗೆ” ಎಂದು ಹೇಳಿದರು.
ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾದ ಒಂದು ದಿನದ ನಂತರ ಖರ್ಗೆಯವರನ್ನ ನವಜೋತ್ ಸಿಂಗ್ ಸಿಧು ಭೇಟಿ ಮಾಡಿದರು.
ಭೇಟಿ ಬಳಿಕ ಟ್ವೀಟ್ ಮಾಡಿರುವ ಸಿಧು, “9 ಬಾರಿ ಶಾಸಕರು, ಮೂರು ಬಾರಿ ಸಂಸದರು, ಹಿಂದುಳಿದವರ ಪರವಾಗಿ ಚಾಂಪಿಯನ್, ಸತ್ಯದ ಧ್ವನಿ……..ವಿಶ್ವಾಸಾರ್ಹತೆ ನಿಮ್ಮ ಹೆಸರು ಮಲ್ಲಿಕಾರ್ಜುನ ಖರ್ಗೆ” ಎಂದಿದ್ದಾರೆ.
ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆನು. ಅವರು ಪಕ್ಷಕ್ಕೆ ಧನಾತ್ಮಕ ಕಂಪನಗಳನ್ನು ಮತ್ತು ಅದೃಷ್ಟವನ್ನು ತರುತ್ತಾರೆ ಎಂದು ಖರ್ಗೆ ಭೇಟಿ ನಂತರ ಸಿಧು ಹೇಳಿದರು. ಭೇಟಿ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಹ ಉಪಸ್ಥಿತರಿದ್ದರು.
1988 ರ ರಸ್ತೆ ಅವಘಡದ ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ ಸಿಧು, ಏಪ್ರಿಲ್ 1 ರಂದು ಪಟಿಯಾಲಾ ಜೈಲಿನಿಂದ ಬಿಡುಗಡೆಯಾದರು.