ಕೇಂದ್ರ ಸರ್ಕಾರ ಯುವಜನತೆಗೆ 2.25 ಲಕ್ಷ ರೂಪಾಯಿ ಗಳಿಸುವ ಅವಕಾಶ ನೀಡ್ತಿದೆ. ಈ ಪ್ರಶಸ್ತಿ ಹಣ ಪಡೆಯಲು ನೀವು ಎರಡು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಸರ್ಕಾರ ಈ ಸ್ಪರ್ಧೆಯನ್ನು ಆಯೋಜಿಸಿದೆ.
ಸರ್ಕಾರ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಮಾಹಿತಿಯನ್ನು ನೀಡಿದೆ. 2.25 ಲಕ್ಷ ರೂಪಾಯಿಗಳ ಬಹುಮಾನ ಗೆಲ್ಲಲು ಎರಡು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಕಿರು ಚಿತ್ರದಲ್ಲಿ ನೀವು ಆಸಕ್ತಿ ಹೊಂದಿದ್ದರೆ ತಂಬಾಕಿನ ದುಷ್ಪರಿಣಾಮದ ಬಗ್ಗೆ ಕಿರುಚಿತ್ರ ರಚಿಸಬೇಕು. ಇದು 30ರಿಂದ 60 ಸೆಕೆಂಡಿನ ಒಳಗಿರಬೇಕು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನೌಕರರು ಮತ್ತು ಅವರ ಸಂಬಂಧಿಕರನ್ನು ಹೊರತುಪಡಿಸಿ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಮೊದಲ ವಿಜೇತರಿಗೆ 2,00,000 ರೂಪಾಯಿ, ಎರಡನೇ ವಿಜೇತರಿಗೆ 1,50,000 ರೂಪಾಯಿ ಹಾಗೂ 3 ನೇ ಬಹುಮಾನವಾಗಿ 1,00,000 ರೂ. ನೀಡಲಾಗುವುದು. ಸಮಾಧಾನಕರ ಬಹುಮಾನವಾಗಿ 10 ಜನರಿಗೆ ತಲಾ 10,000 ರೂಪಾಯಿ ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ https://www.mygov.in/task/short-film-making-contest ಗೆ ಭೇಟಿ ನೀಡಬೇಕು. ಇದಕ್ಕೆ ಜೂನ್ 30 ಕೊನೆ ದಿನಾಂಕವಾಗಿದೆ.
ವಿಶ್ವ ತಂಬಾಕು ರಹಿತ ದಿನ 2021 ರ ಸಂದರ್ಭದಲ್ಲಿ ಭಾರತ ಸರ್ಕಾರ ಪ್ರಬಂಧ ಬರೆಯುವ ಸ್ಪರ್ಧೆಯನ್ನು ಘೋಷಿಸಿದೆ. ಈ ಸ್ಪರ್ಧೆಯಲ್ಲಿ 25 ಸಾವಿರ ರೂಪಾಯಿಗಳನ್ನು ಗೆಲ್ಲುವ ಅವಕಾಶವಿದೆ. 8ನೇ ತರಗತಿ, 9ನೇ ತರಗತಿ, 10ನೇ ತರಗತಿ ಹಾಗೂ 11, 12ನೇ ತರಗತಿ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಬಂಧ ಸಾವಿರ ಪದ ಮೀರಿರಬಾರದು.