ಬೆಂಗಳೂರು: ಬೆಂಗಳೂರು ನಗರದಲ್ಲಿ ಪಟಾಕಿ ಅಕ್ರಮ ಮಾರಾಟ ದಾಸ್ತಾನು ಮಾಡಿದ್ದ 56 ವ್ಯಾಪಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ಟೋಬರ್ 31 ರಿಂದ ನವೆಂಬರ್ 1ರವರೆಗೆ ಬೆಂಗಳೂರಿನ ಎಲ್ಲಾ ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಪರಿಶೀಲನೆ ಸಂದರ್ಭದಲ್ಲಿ 56 ಕ್ಕೂ ಅಧಿಕ ವ್ಯಾಪಾರಿಗಳು ನಿಯಮ ಉಲ್ಲಂಘಿಸಿ ಪಟಾಕಿ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ. ಶನಿವಾರ ಮತ್ತು ಭಾನುವಾರ ಕೂಡ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಹೇಳಲಾಗಿದೆ.
ಬೆಂಗಳೂರಿನ 72 ಮೈದಾನಗಳಲ್ಲಿ ತಾತ್ಕಾಲಿಕವಾಗಿ ಪಟಾಕಿ ಮಾರಾಟಕ್ಕೆ 315 ಪರವಾನಿಗೆ ನೀಡಲಾಗಿತ್ತು. ಪರವಾನಿಗೆ ಪಡೆದುಕೊಳ್ಳದೆ ಕೆಲವರು ರಸ್ತೆ ಬದಿ, ತಳ್ಳುವ ಗಾಡಿಗಳಲ್ಲಿಯೂ ಪಟಾಕಿ ಮಾರಾಟ ಮಾಡುತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು ಉತ್ತರ ವಲಯದಲ್ಲಿ 9, ಆಗ್ನೇಯ ವಲಯದಲ್ಲಿ 9, ಈಶಾನ್ಯ ವಲಯದಲ್ಲಿ 19, ವೈಟ್ಫೀಲ್ಡ್ ವಲಯದಲ್ಲಿ 9 ಸೇರಿ ಒಟ್ಟು 56 ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.