ಬೆಂಗಳೂರು: ಇತ್ತೀಚೆಗೆ ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಬಸ್, ಟ್ಯಾಕ್ಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪಟಾಕಿ ಸಾಗಾಟ ನಿಷೇಧಿಸಿದೆ.
ದೀಪಾವಳಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಾರಿಗೆ ವಾಹನಗಳಲ್ಲಿ ಪಟಾಕಿ ಸಾಗಾಟ ಮಾಡುವುದನ್ನು ಸಾರಿಗೆ ಇಲಾಖೆ ನಿಷೇಧಿಸಿದ್ದು, ಆದೇಶ ಮೀರಿ ಪಟಾಕಿ ಸಾಗಿಸಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಪ್ರಯಾಣಿಕರು ತಮ್ಮೊಂದಿಗೆ ಪಟಾಕಿ ತೆಗೆದುಕೊಂಡು ಹೋಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುವಂತೆ ಖಾಸಗಿ ಬಸ್ ಮಾಲೀಕರಿಗೆ ಸೂಚನೆ ನೀಡಲಾಗಿದೆ.
ಒಂದು ವೇಳೆ ಪಟಾಕಿ ಪತ್ತೆಯಾದಲ್ಲಿ ಅಂತಹ ಪ್ರಯಾಣಿಕರು ಮತ್ತು ಬಸ್ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕ ವಾಹನ ಹೊರತುಪಡಿಸಿ ಗೂಡ್ಸ್ ವಾಹನಗಳಲ್ಲಿ ಪಟಾಕಿ ಸಾಗಣೆಗೆ ಅವಕಾಶ ನೀಡಿದ್ದರೂ ಸಾರಿಗೆ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ಅನುಮತಿ ಪಡೆಯದೆ ಪಟಾಕಿ ಸಾಗಿಸಿದ್ದಲ್ಲಿ ಅಂತಹ ವಾಹನಗಳ ಪರ್ಮಿಟ್ ರದ್ದು ಮಾಡಿ ವಶಕ್ಕೆ ಪಡೆಯಲು ಸಾರಿಗೆ ಇಲಾಖೆ ತೀರ್ಮಾನಿಸಿದೆ.