
ಚಳಿಗಾಲ ಶುರುವಾಗಿದೆ. ಒಣ ಚರ್ಮದವರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಚರ್ಮ ಬಿರುಕು ಬಿಡುತ್ತಿದ್ದು, ತುರಿಕೆ, ರಕ್ತ ಬರುವ ಸಮಸ್ಯೆ ಕೆಲವರನ್ನು ಕಾಡುತ್ತದೆ. ಚಳಿಗಾಲದಲ್ಲಿ ಮುಖ, ಕೈಗಳ ರಕ್ಷಣೆ ಜೊತೆ ಪಾದಗಳ ರಕ್ಷಣೆ ಬಹಳ ಮುಖ್ಯ.
ಮೊದಲು ಸೋಪ್ ನೀರಿನಲ್ಲಿ ಕಾಲನ್ನು ತೊಳೆದುಕೊಳ್ಳಿ. ಕಾಟನ್ ಬಟ್ಟೆಯಲ್ಲಿ ಕಾಲನ್ನು ಒರೆಸಿಕೊಂಡು ಸಾಸಿವೆ ಎಣ್ಣೆಯನ್ನು ಪಾದಗಳಿಗೆ ಸರಿಯಾಗಿ ಹಚ್ಚಿಕೊಳ್ಳಿ. ಸಾಕ್ಸ್ ಧರಿಸಿ ನಿದ್ದೆ ಮಾಡಿ. ಬೆಳಿಗ್ಗೆ ಪಾದ ಮೃದುವಾಗುವುದಲ್ಲದೆ ಹಿತವೆನಿಸುತ್ತದೆ.
ಬೇವಿನ ಎಲೆಯ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಮೂರು ಟೀ ಸ್ಪೂನ್ ಅರಿಶಿನವನ್ನು ಬೆರೆಸಿ. ಬಿರುಕುಬಿಟ್ಟ ಹಿಮ್ಮಡಿಗೆ ಇದನ್ನು ಹಚ್ಚಿ. ಅರ್ಧ ಗಂಟೆ ನಂತ್ರ ಬಿಸಿ ನೀರಿನಲ್ಲಿ ಹಿಮ್ಮಡಿಯನ್ನು ತೊಳೆದುಕೊಳ್ಳಿ.
ಬೆಚ್ಚಗಿನ ನೀರಿಗೆ ಉಪ್ಪನ್ನು ಹಾಕಿ ಅದರಲ್ಲಿ 10 ನಿಮಿಷಗಳ ಕಾಲ ಕಾಲನ್ನು ಅದ್ದಿಡಿ. ನಂತ್ರ ಡೆಡ್ ಸ್ಕಿನ್ ತೆಗೆದು, ಕಾಲನ್ನು ಒಣಗಿಸಿಕೊಂಡು ಪೆಟ್ರೋಲಿಯಂ ಜೆಲ್ಲಿ ಹಚ್ಚಿಕೊಳ್ಳಿ.
ಒಂದು ಟಬ್ ನಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಕಪ್ ಜೇನು ತುಪ್ಪವನ್ನು ಸೇರಿಸಿ. 15-20 ನಿಮಿಷ ಕಾಲನ್ನು ಆ ನೀರಿನಲ್ಲಿ ಅದ್ದಿಡಿ. ನಿಧಾನವಾಗಿ ಸ್ಕ್ರಬ್ ಮಾಡಿ. ಬಿರುಕುಬಿಟ್ಟ ಹಿಮ್ಮಡಿಯಿಂದ ಆರಾಮ ಪಡೆಯಲು ವಾರದಲ್ಲಿ ಹಲವು ಬಾರಿ ಇದನ್ನು ಮಾಡಬಹುದು.
ಹಾಗೆ ಲಿಂಬೆ ರಸ ಹಾಗೂ ಬೆಚ್ಚಗಿನ ನೀರಿನ ಮಿಶ್ರಣದಲ್ಲಿ 15 ನಿಮಿಷ ಕಾಲುಗಳನ್ನಿಟ್ಟುಕೊಳ್ಳಬಹುದು. ಆದ್ರೆ ನೀರು ತುಂಬಾ ಬಿಸಿಯಾಗಿರದಂತೆ ನೋಡಿಕೊಳ್ಳಿ.