
ಬೆಂಗಳೂರು: ಕೊರೋನಾ ನಂತರ ಸಾರ್ವಜನಿಕರಲ್ಲಿ, ಮಕ್ಕಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಶಾಲಾ-ಕಾಲೇಜು ಹಂತದ ಮಕ್ಕಳಿಗೆ ನಾನಾ ಕಾಯಿಲೆ ಕಂಡುಬರುತ್ತಿವೆ. ಸಾಂಕ್ರಾಮಿಕ ಕಾಯಿಲೆಗಳಿಗೆ ಮಕ್ಕಳು ತುತ್ತಾಗುತ್ತಿದ್ದಾರೆ. ಹೀಗಾಗಿ ಶಾಲಾ, ಕಾಲೇಜು ಮಕ್ಕಳಿಗೆ ಸಿಪಿಆರ್ ತರಬೇತಿ ನೀಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಹೃದಯಘಾತವಾದ ಸಂದರ್ಭದಲ್ಲಿ ತಕ್ಷಣಕ್ಕೆ ಏನು ಮಾಡಬೇಕು? ಹೇಗೆ ನಿರ್ವಹಿಸಬೇಕು? ಗೋಲ್ಡನ್ ಟೈಮ್ ನಲ್ಲಿ ಏನು ಮಾಡಿದರೆ ಜೀವ ಉಳಿಸಬಹುದು ಎನ್ನುವ ಜ್ಞಾನ ಬಹುತೇಕರಲ್ಲಿ ಇರುವುದಿಲ್ಲ. ಹೀಗಾಗಿ ಹೃದಯಘಾತದ ವೇಳೆ ತಕ್ಷಣದ ಚಿಕಿತ್ಸೆ ನೀಡದೆ ಗೊಂದಲದಲ್ಲಿ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರೌಢಶಾಲೆ, ಪಿಯು ಕಾಲೇಜ್ ನ ಮಕ್ಕಳಿಗೆ ಸಿಪಿಆರ್ ತರಗತಿ ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ವಾರದಲ್ಲಿ 40 ನಿಮಿಷ ಒಂದು ತರಗತಿ ಅವಧಿಯಲ್ಲಿ ಸಿಪಿಆರ್ ಕುರಿತಾಗಿ, ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿ ನೀಡಲಾಗುವುದು. ಮಕ್ಕಳಿಗೆ ಆರೋಗ್ಯದ ಬಗ್ಗೆ ತರಬೇತಿ, ಪ್ರಾಥಮಿಕ ಚಿಕಿತ್ಸೆಯ ಶಿಕ್ಷಣ ನೀಡಲು ಶಾಲಾ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಶೈಕ್ಷಣಿಕ ಪಠ್ಯದಲ್ಲಿ ಸಿಪಿಆರ್ ವಿಷಯ ಸೇರ್ಪಡೆಗೆ ಮುಂದಾಗಿದೆ.