ಸಿಪಿಐ(ಎಂ) ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷಗಳ ಬಳಿಕ 9 ಜನ ಆರ್.ಎಸ್.ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಕೇರಳದ ತಲಶ್ಯೇರಿ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ ತೀರ್ಪು ಪ್ರಕಟಿಸಿದೆ.
2025ರಲ್ಲಿ ಕನ್ನಪುರಂ ಚುಂಡಾದ ಸಿಪಿಐ(ಎಂ) ಕಾರ್ಯಕರ್ತ ರಿಜಿತ್ ಶಂಕರನ್ ಮೇಲೆ ಆರ್.ಎಸ್.ಎಸ್ ಕಾರ್ಯಕರ್ತರು ದಾಳಿ ನಡೆಸಿ ಹತ್ಯೆಗೈದಿದ್ದರು. ಘಟನೆಯಲ್ಲಿ ರಿಜಿತ್ ನ ಮೂವರು ಸ್ನೇಹಿತರು ಗಾಯಗೊಂಡಿದ್ದರು. ಇದೀಗ ಪ್ರಕರಣ ಸಂಬಂಧ ಜ.4ರಂದು ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ ಆರ್.ಎಸ್.ಎಸ್ ನ 10 ಆರೋಪಿಗಳು ದೋಷಿಗಳು ಎಂದು ಪರಿಗಣಿಸಿತ್ತು. ಅಲ್ಲದೇ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.
10 ಆರೋಪಿಗಳಲ್ಲಿ ಓರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಉಳಿದ ಆರೋಪಿಗಳಾದ ಸುಧಾಕರನ್ (57), ಜಯೇಶ್ (41), ರಂಜಿತ್ (44), ಅಜಿಂದ್ರನ್ (51), ಅನಿಲ್ ಕುಮಾರ್ (52), ರಾಜೇಶ್(46), ಶ್ರೀಕಾಂತ್(47), ಶ್ರೀಜಿತ್ (43) ಹಾಗೂ ಭಾಸ್ಕರ್(67) ಎಂಬ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಂದು ಕೋರ್ಟ್ ಆದೇಶ ಹೊರಡಿಸಿದೆ.