ನವದೆಹಲಿ: ನಮ್ಮ ನೋವುಗಳನ್ನು ನಾಲ್ಕು ಗೋಡೆಗಳ ಮಧ್ಯೆ ರಾಜ್ಯ ಬಿಜೆಪಿ ಉಸ್ತುವಾರಿಯವರಿಗೆ ಹೇಳಿದ್ದೇವೆ. ನಾವು ಈಗ ಪರೀಕ್ಷೆ ಬರೆದಿದ್ದು, ರಿಸಲ್ಟ್ ಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದ ಸಚಿವ ಸಿ.ಪಿ. ಯೋಗೇಶ್ವರ್ ದಿಢೀರ್ ದೆಹಲಿಗೆ ತೆರಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಾಗಿ ಚರ್ಚೆ ಮತ್ತು ಬೆಳವಣಿಗೆಗಳು ನಡೆದಿರುವ ಹೊತ್ತಲ್ಲಿ ಯೋಗೇಶ್ವರ್ ದೆಹಲಿ ಭೇಟಿ ಕುತೂಹಲ ಮೂಡಿಸಿದೆ. ಸಿಎಂ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ದೆಹಲಿಗೆ ತೆರಳಿದ್ದು, ಇದೇ ವೇಳೆ ಯೋಗೇಶ್ವರ್ ಕೂಡ ದೆಹಲಿಗೆ ಭೇಟಿ ನೀಡಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಚರ್ಚೆ ನಡೆಸಿದ್ದ ಯೋಗೇಶ್ವರ್ ಅದರ ಮುಂದುವರೆದ ಭಾಗವಾಗಿ ಚರ್ಚಿಸಲು ದೆಹಲಿಗೆ ತೆರಳಿದ್ದು, ಹೋಟೆಲ್ ನಲ್ಲಿ ತಂಗಿದ್ದಾರೆ. ಅವರು ದೆಹಲಿಯಲ್ಲಿಂದು ಅರುಣ್ ಸಿಂಗ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಈಗಾಗಲೇ ನಾಯಕತ್ವ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಲಾಗಿದ್ದರೂ, ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದ ಯೋಗೇಶ್ವರ್ ದಿಢೀರ್ ದೆಹಲಿ ಭೇಟಿ ಕುತೂಹಲ ಮೂಡಿಸಿದೆ.
ನಾಯಕತ್ವ ಬದಲಾವಣೆ ಬೇಡಿಕೆಯನ್ನು ಜೀವಂತವಾಗಿಟ್ಟಿರುವ ಸಿ.ಪಿ. ಯೋಗೇಶ್ವರ್ ತಮ್ಮ ದೂರುಗಳನ್ನು ಪಕ್ಷದ ವರಿಷ್ಠರು ಪರಿಗಣಿಸುತ್ತಾರೆ ಎಂಬ ಬಗ್ಗೆ ಆಪ್ತರ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.