ಮಂಡ್ಯ: ತುಂಬು ಗರ್ಭಿಣಿ ಹಸುವಿನ ಸೀಮಂತ ಮಾಡಿ, ಊರವರಿಗೆಲ್ಲ ಸಿಹಿಯೂಟ ಹಾಕಿ ಸಂಭ್ರಮಿಸಿದ ಅಪರೂಪದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮುದ್ದಗೆರೆ ಗ್ರಾಮದಲ್ಲಿ ನಡೆದಿದೆ.
ಮುದ್ದಗೆರೆ ಗ್ರಾಮದ ರಾಜಪ್ಪ ಕುಟುಂಬ ಹಸುವಿಗೆ ಮನುಷ್ಯರಂತೆಯೇ ಸೀಮಂತ ಕಾರ್ಯಕ್ರಮವನ್ನು ಮಾಡಿದೆ. ಶಾಸ್ತ್ರೋಕ್ತವಾಗಿ ಪೂಜೆ, ಊಡುಗೊರೆಯನ್ನು ನೀಡಿ ಹಸುವನ್ನು ಸಿಂಗರಿಸಿದ್ದಾರೆ. ಅಷ್ಟೇ ಅಲ್ಲ ಸೀಮಂತ ಕಾರ್ಯಕ್ರಮಕ್ಕೆ ಇಡೀ ಗ್ರಾಮದ ಜನತೆಗೆ ಆಹ್ವಾನಿಸಿ, ಭರ್ಜರಿ ಊಟ ಹಾಕಿದ್ದಾರೆ.
ಗಿಡ್ದ ಹಸುವಿಗೆ ಸೀಮಂತ ನೆರವೇರಿಸಿದ ಕುಟುಂಬದವರು ಕೊಬ್ಬರಿ, ಬೆಲ್ಲ, ಹೂವು, ಹಣ್ಣು, ಕಲ್ಲುಸಕ್ಕರೆ, ಕರ್ಜೂರ, ದ್ರಾಕ್ಷಿ, ಗೋಡಂಬಿ ಹಾಗೂ ಬಳೆ, ಅರಿಷಿಣ-ಕುಂಕುಮ, ಸೀರೆ ಇಟ್ಟು ವಿಶೇಷ ಪೂಜೆ ಮಾಡಿದ್ದಾರೆ. ಗ್ರಾಮಸ್ಥರು, ಬಂಧುಗಳನ್ನು ಕರೆದು ಸಿಹಿಯೂಟ ಹಾಕಿ ಸಂಭ್ರಮಿಸಿದ್ದಾರೆ.