ನವದೆಹಲಿ: ತಾಜಾ ಗೋಮೂತ್ರ ಅಪಾಯಕಾರಿಯಾಗಿದ್ದು, ಮಾನವ ಬಳಕೆಗೆ ಯೋಗ್ಯವಲ್ಲ ಎಂದು ಭಾರತೀಯ ಪಶು ಸಂಶೋಧನಾ ಸಂಸ್ಥೆ ಅಧ್ಯಯನವೊಂದು ಹೇಳಿದೆ. ಗೋಮೂತ್ರವು ಮನುಷ್ಯರಿಗೆ ಸುರಕ್ಷಿತವಲ್ಲ, ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿದೆ ಎಂದು ಭಾರತದ ಉನ್ನತ ಪ್ರಾಣಿ ಸಂಶೋಧನಾ ಸಂಸ್ಥೆ ತಿಳಿಸಿದೆ.
ಹಸು ಹಾಗೂ ಹೋರಿಗಳ ಮೂತ್ರದ ಮಾದರಿ ಬಳಸಿಕೊಂಡು ಅಧ್ಯಯನ ನಡೆಸಲಾಗಿದೆ. ಗೋಮೂತ್ರದಲ್ಲಿ ಕನಿಷ್ಠ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಗಳನ್ನು ಕಂಡುಹಿಡಿಯಲಾಗಿದೆ. ಎಸ್ಚೆರಿಚಿಯಾ ಕೋಲಿ ಬ್ಯಾಕ್ಟೀರಿಯ ಮಾನವರ ಹೊಟ್ಟೆಯಲ್ಲಿ ಸೋಂಕು ಸೃಷ್ಟಿಸಬಹುದು ಎಂದು ಹೇಳಲಾಗಿದೆ.
ಗೋಮೂತ್ರ ಸೇವನೆಯ ಪರಿಣಾಮ ಮತ್ತು ಅಡ್ಡ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ತಾಜಾ ಗೋಮೂತ್ರದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಗಳಿದ್ದು, ಮಾನವ ಸೇವನೆಗೆ ಅಪಾಯಕಾರಿ ಎಂದು ಹೇಳಲಾಗಿದೆ. 2022ರ ಜೂನ್ ನಿಂದ ನವೆಂಬರ್ ವರೆಗೆ ಸಾಹಿವಾಲ್, ಥಾಪರ್ ಕರ್ ಸೇರಿ ವಿವಿಧ ಮಾದರಿಯ ಹಸುಗಳ ಗೋಮೂತ್ರ ಪಡೆದು ಮೂವರು ಪಿ.ಹೆಚ್.ಡಿ. ವಿದ್ಯಾರ್ಥಿಗಳ ಜೊತೆಗೂಡಿ ಡಾ. ಭೋಜಾರಾಜ ಸಿಂಗ್ ಅಧ್ಯಯನ ನಡೆಸಿದ್ದಾರೆ.
ಇದರೊಂದಿಗೆ ಪ್ರತ್ಯೇಕವಾಗಿ ಹಸು, ಎಮ್ಮೆ ಮಾನವರ 73 ಮೂತ್ರದ ಮಾದರಿಗಳ ಅಂಕಿ ಅಂಶಗಳ ವಿಶ್ಲೇಷಣೆ ನಡೆಸಲಾಗಿದೆ. ಎಮ್ಮೆ ಮೂತ್ರದಲ್ಲಿ ಬ್ಯಾಕ್ಟಿರಿಯ ನಿರೋಧಕ ಚಟುವಟಿಕೆ ಹಸುಗಳಿಗಿಂತ ಹೆಚ್ಚು ಉತ್ತಮವಾಗಿದೆ ಎನ್ನುವ ಫಲಿತಾಂಶ ಬಂದಿದೆ. ತಾಜಾ ಗೋಮೂತ್ರಕ್ಕೆ ಪ್ರತಿಯಾಗಿ ಶುದ್ಧೀಕರಿಸಿದ ಗೋಮೂತ್ರ ಸಾಂಕ್ರಾಮಿಕ ಬ್ಯಾಕ್ಟೀರಿಯ ಹೊಂದಿಲ್ಲ. ಇದರ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ ಎಂದು ಭೋಜರಾಜ ಸಿಂಗ್ ಹೇಳಿದ್ದಾರೆ.
ಐ.ವಿ.ಆರ್.ಐ. ಮಾಜಿ ನಿರ್ದೇಶಕ ಆರ್.ಎಸ್. ಚೌಹಾಣ್ ಈ ಸಂಶೋಧನೆಯನ್ನು ಪ್ರಶ್ನಿಸಿದ್ದು, ಕಳೆದ 25 ವರ್ಷಗಳಿಂದ ಗೋಮೂತ್ರದ ಬಗ್ಗೆ ನಾನು ಸಂಶೋಧನೆ ನಡೆಸುತ್ತಿದ್ದೇನೆ. ಶುದ್ಧೀಕರಿಸಿದ ಗೋಮೂತ್ರ ಮಾನವರ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಕ್ಯಾನ್ಸರ್ ಮತ್ತು ಕೊರೊನಾ ವಿರುದ್ಧ ಸಹಾಯ ಮಾಡುತ್ತದೆ ಎಂದು ನಮಗೆ ಗೊತ್ತಾಗಿದೆ. ಶುದ್ಧೀಕರಿಸಿದ ಗೋಮೂತ್ರ ಬಳಸುವಂತೆ ನಾವು ಶಿಫಾರಸು ಮಾಡುತ್ತೇವೆ ಎಂದು ತಿಳಿಸಿದ್ದಾರೆ.