ಲಕ್ನೋ: ಗೋಮೂತ್ರದ ಸಾರವು ಒಳ್ಳೆಯ ಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ಗುಣಗಳಿಂದ ಸಮೃದ್ಧವಾಗಿದೆ. ಇದು ಮಾನವರಿಗೆ ವರದಾನವಾಗಬಹುದು ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.
ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐವಿಆರ್‌ಐ) ಹಿರಿಯ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಿದ್ದು, ಈ ಅಭಿಪ್ರಾಯವನ್ನು ಮಂಡಿಸಿದೆ. ಒಂಬತ್ತು ಸದಸ್ಯರ ವಿಜ್ಞಾನಿಗಳ ತಂಡವು ನಾಲ್ಕು ವರ್ಷಗಳ ಕಾಲ ನಡೆಸಿದ ಅಧ್ಯಯನವು ಗೋಮೂತ್ರವು ಮನುಷ್ಯರಿಗೆ ಅಪಾಯಕಾರಿ ಎಂಬ ಹಿಂದಿನ ಹೇಳಿಕೆಯನ್ನು ಅಲ್ಲಗಳೆಯಿತು. ಗೋಮೂತ್ರದ ಸಾರವು ವೈದ್ಯಕೀಯ ಮತ್ತು ಔಷಧೀಯ ಗುಣಗಳಿಂದ ತುಂಬಿದೆ ಎಂದು ಪ್ರತಿಪಾದಿಸಿದೆ.
ಈ ಸಂಶೋಧನೆಯಲ್ಲಿ, ಸಾಹಿವಾಲ್ ಮತ್ತು ಥಾರ್ಪಾರ್ಕರ್ ಎಂಬ ಎರಡು ಸ್ಥಳೀಯ ಹಸುವಿನ ತಳಿಗಳ 14 ಮೂತ್ರದ ಮಾದರಿಗಳನ್ನು ಮಿಶ್ರತಳಿಗಳ ಮಾದರಿಗಳೊಂದಿಗೆ ಹೋಲಿಸಲಾಗಿದೆ. ವರ್ಷದ ವಿವಿಧ ಋತುಗಳಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹಸುಗಳ ತಾಜಾ ಮೂತ್ರದಲ್ಲಿ ಬ್ಯಾಕ್ಟೀರಿಯಾದ ಮಾಲಿನ್ಯದ ಸಾಧ್ಯತೆಯನ್ನು ತಪ್ಪಿಸಲು, ಸಾರಗಳನ್ನು ಸಾಂದ್ರೀಕೃತ ರೂಪದಲ್ಲಿ ಅಧ್ಯಯನ ಮಾಡಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಸಂಶೋಧನೆಯ ಪ್ರಕಾರ, ಮಿಶ್ರತಳಿ ಹಸುಗಳಿಗೆ ಹೋಲಿಸಿದರೆ ಸಾಹಿವಾಲ್ ಮತ್ತು ಥಾರ್ಪಾರ್ಕರ್ ತಳಿಗಳ ಮೂತ್ರವು ಹೆಚ್ಚು ಬ್ಯಾಕ್ಟೀರಿಯಾ ವಿರೋಧಿ ಎಂದು ಕಂಡುಬಂದಿದೆ. ಗೋಮೂತ್ರದ ಸಾರವು ಇ.ಕೋಲಿ, ಸಾಲ್ಮೊನೆಲ್ಲಾ, ಸ್ಯೂಡೋಮೊನಾಸ್, ಎರುಗಿನೋಸಾ ಮತ್ತು ಗ್ರಾಂ-ಪಾಸಿಟಿವ್ ಬ್ಯಾಕ್ಟೀರಿಯಾಗಳಾದ ಲಿಸ್ಟೇರಿಯಾ ಮೊನೊಸೈಟೊಜೆನ್ಸ್, ಬ್ಯಾಸಿಲಸ್ ಸೆರಿಯಸ್, ಸ್ಟ್ಯಾಫಿಲೋಕೊಕಸ್ ಔರೆಸ್ ಮುಂತಾದ ಬ್ಯಾಕ್ಟೀರಿಯಾಗಳ ವಿರುದ್ಧ ಬ್ಯಾಕ್ಟೀರಿಯಾನಾಶಕ (ಕೊಲ್ಲುವ ಸಾಮರ್ಥ್ಯ) ಕಂಡುಬಂದಿದೆ.
ಅಲ್ಲದೆ, ಹಸುವಿನ ಮೂತ್ರದ ಸಾರವು ಯೀಸ್ಟ್‌ಗಳ ವಿರುದ್ಧ ಆಂಟಿಫಂಗಲ್ ಪರಿಣಾಮಗಳನ್ನು ಹೊಂದಿದೆ ಎಂದು ಸಂಶೋಧನೆಯು ಕಂಡುಹಿಡಿದಿದೆ ಎಂದು ಕೂಡ ಸಂಶೋಧನೆಯಲ್ಲಿ ಹೇಳಲಾಗಿದೆ.