ಶಿವಮೊಗ್ಗ: ಗೋವುಗಳ ವಧೆ ಮಾಡಿ ಅಕ್ರಮವಾಗಿ ಮಾಂಸ ಮಾರಾಟಕ್ಕೆ ಮುಂದಾಗಿದ್ದ ಕಸಾಯಿಖಾನೆಯನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಡೆಮಾಲಿಷ್ ಮಾಡಿದೆ.
ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೂಳೇಬೈಲ್ ಪ್ರದೇಶದಲ್ಲಿ ಅಬ್ದುಲ್ ಅಜೀಜ್ ತಮ್ಮ ವಾಸದ ಮನೆಯ ಹಿಂಭಾಗದಲ್ಲಿ ದನಗಳನ್ನು ಅಕ್ರಮವಾಗಿ ವಧೆ ಮಾಡಿ ಮಾಂಸ ಮಾರಾಟ ಮಾಡಲು ಮುಂದಾಗಿದ್ದ ಖಚಿತ ಮಾಹಿತಿ ಮೇರೆಗೆ ತುಂಗಾ ನಗರ ಪಿಐ ಬಿ. ಮಂಜುನಾಥ್ ನೇತೃತ್ವದಲ್ಲಿ ಪೊಲೀಸರು ಹಾಗೂ ಪಶು ವೈದ್ಯಾಧಿಕಾರಿ ರೇಖಾ ಅವರನ್ನು ಒಳಗೊಂಡ ತಂಡ ದಾಳಿ ನಡೆಸಿದೆ.
ದಾಳಿಯ ಸಂದರ್ಭದಲ್ಲಿ 7 ಹಸುಗಳನ್ನು ವಧೆ ಮಾಡಿರುವುದು ಕಂಡುಬಂದಿದ್ದು, ಶೆಡ್ ಹಿಂಭಾಗದಲ್ಲಿ ಕಟ್ಟಿ ಹಾಕಿದ್ದ 9 ದನ ಕರುಗಳನ್ನು ರಕ್ಷಣೆ ಮಾಡಲಾಗಿದೆ. ರಕ್ಷಿಸಲಾದ ದನ ಕರುಗಳನ್ನು ಗೋಶಾಲೆಗೆ ಬಿಡಲಾಗಿದೆ. ಆರೋಪಿ ವಿರುದ್ಧ ಕರ್ನಾಟಕ ಗೋಹತ್ಯೆ ತಡೆಗಟ್ಟುವಿಕೆ ಮತ್ತು ಜಾನುವಾರುಗಳ ಸಂರಕ್ಷಣೆ ಕಾಯಿದೆ-2020 ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಮಹಾನಗರ ಪಾಲಿಕೆ ವತಿಯಿಂದ ಗೋ ವಧೆ ಮಾಡಿದ್ದ ಶೆಡ್ ಧ್ವಂಸಗೊಳಿಸಲಾಗಿದೆ.