ಬೆಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ಅಧ್ಯಾದೇಶ ಇದೇ ಜನವರಿ 18 ರಿಂದ ರಾಜ್ಯದಲ್ಲಿ ಜಾರಿಯಾಗಲಿದ್ದು ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಾಟ ಸಂಪೂರ್ಣ ನಿಷೇಧವಾಗುತ್ತದೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಯ್ದೆ ಸಂಪೂರ್ಣ ಜಾರಿಗೆ ಬರಲಿದ್ದು, ನಿಯಮಗಳನ್ನು ರೂಪಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ಅವುಗಳನ್ನು ಬಿಡುಗಡೆ ಮಾಡಲಾಗುವುದು. ಜಾನುವಾರು ಸಾಗಾಣಿಕೆ ಸಂಬಂಧಿಸಿದಂತೆ ಕೂಡಲೇ ನಿಯಮಗಳನ್ನು ರೂಪಿಸಿ ಜಾರಿಗೊಳಿಸಲಾಗುವುದು. ರಾಜ್ಯದಲ್ಲಿ ರೈತರು, ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಣೆ ಮಾಡುವವರು ಯಾವುದೇ ಕಾರಣಕ್ಕೂ ಗೊಂದಲಕ್ಕೀಡಾಗಬಾರದು ಎಂದು ಸಚಿವರು ರೈತರಲ್ಲಿ ಮನವಿ ಮಾಡಿದ್ದಾರೆ.
ಪೊಲೀಸ್ ಇಲಾಖೆಯು ಗೋವುಗಳ ಸಂರಕ್ಷಣೆಯಲ್ಲಿ ತೊಡಗಿರುವ ಎನ್.ಜಿ.ಒ ಹಾಗೂ ಪ್ರಾಣಿ ಕಲ್ಯಾಣ ಮಂಡಳಿಯ ಜೊತೆಗೆ ಕೈ ಜೋಡಿಸಲು ಹಾಗೂ ಎಲ್ಲ ಹಂತಗಳಲ್ಲಿ ಕಾಯ್ದೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಅಲ್ಲದೇ ಗೋಹತ್ಯೆ, ಅಕ್ರಮ ಸಾಗಾಟದ ಮೇಲೆ ಪೊಲೀಸ್ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಗೆ ಹೆಚ್ಚು ನಿಗಾವಹಿಸಬೇಕು ಎಂದು ತಿಳಿಸಿದ್ದಾರೆ.
ಅಕ್ರಮ ಗೋವುಗಳ ಸಾಗಾಟ ಮತ್ತು ವಧೆ ಆಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಆ ಜಿಲ್ಲೆ ಅಥವಾ ತಾಲೂಕಿನ ವ್ಯಾಪ್ತಿಯ ಪಶುಪಾಲನಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲು ಸಾರ್ವಜನಿಕರಿಗೆ ತಿಳಿಸರುತ್ತಾರೆ. ಸಾರ್ವಜನಿಕರು ಉದ್ವೇಗದಲ್ಲಿ ಕಾನೂನನ್ನು ಯಾವುದೇ ಕಾರಣಕ್ಕೂ ಕೈಗೆತ್ತಿಕೊಳ್ಳಬಾರದು ಎಂದು ತಿಳಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲವಾದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಗೋಹತ್ಯೆ ನಿಷೇಧದ ಹಿನ್ನೆಲೆಯಲ್ಲಿ ಗೋವುಗಳ ಸಂರಕ್ಷಣೆಗೆ ಬೇಕಾಗುವ ಗೋಶಾಲೆ ಹಾಗೂ ಇನ್ನಿತರ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಹಂತ ಹಂತವಾಗಿ ಗೋಶಾಲೆಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.