ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವ್ಯಾಕ್ಸಿನ್ ಗಳನ್ನ ಕದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೈದರಾಬಾದ್ ನ ಜಾಮ್ ಬಾಗ್ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ದುಷ್ಕರ್ಮಿಗಳು, ಕೇಂದ್ರದಲ್ಲಿದ್ದ 24 ವಯಲ್ಸ್ ಕೋವಿಶೀಲ್ಡ್ ಹಾಗೂ 17 ವಯಲ್ಸ್ ಕೋವ್ಯಾಕ್ಸಿನ್ ಲಸಿಕೆಗಳನ್ನ ಕದ್ದೊಯ್ದಿದ್ದಾರೆ.
ಜನವರಿ 10, ಸೋಮವಾರ ರಾತ್ರಿಯಂದು ಮೀರ್ ಚೌಕ್ ಲಿಮಿಟ್ಸ್ ನಲ್ಲಿ ಘಟನೆ ನಡೆದಿದೆ. 340 ಡೋಸ್ ಕೋವಿಶೀಲ್ಡ್ ಹಾಗೂ 270 ಡೋಸ್ ಕೋವ್ಯಾಕ್ಸಿನ್ ಅನ್ನ ಕಳ್ಳರು ಕದ್ದೊಯ್ದಿದ್ದಾರೆ. ಅಲ್ಲದೆ ಕೇಂದ್ರದಲ್ಲಿದ್ದ ಎರಡು ಕಂಪ್ಯೂಟರ್ ಸಿಸ್ಟಮ್, ಬುಕ್ಸ್, ಪೆನ್ ಸೇರಿದಂತೆ ಹಲವು ಸ್ಟೇಷನರಿ ವಸ್ತುಗಳನ್ನು ಕದ್ದಿದ್ದಾರೆ.
ಜೊತೆಗೆ ಕೇಂದ್ರದ ಕಾಂಪೌಂಡ್ ನಲ್ಲಿ ನಿಂತಿದ್ದ ಆಟೋರಿಕ್ಷಾದ ಚಕ್ರಗಳನ್ನ ಎಗರಿಸಿದ್ದಾರೆ. ಕೇಂದ್ರದ ಆರೋಗ್ಯ ಕಾರ್ಯಕರ್ತರು ಈ ಆಟೋರಿಕ್ಷಾದಲ್ಲೆ ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ವ್ಯಾಕ್ಸಿನ್ ನೀಡುತ್ತಿದ್ದರು ಎಂಬುದು ಗಮನಾರ್ಹ.
ಈ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಪೊಲೀಸ್ ಕಂಪ್ಲೆಂಟ್ ದಾಖಲಿಸಿದ್ದು, ಕಳ್ಳರನ್ನ ಹಿಡಿಯಲು ಪೊಲೀಸರು ತನಿಖೆ ಶುರು ಮಾಡಿದ್ದಾರೆ.