ಕೋವಿಡ್ ಲಸಿಕೆ ಪಡೆದ ಮಂದಿಯಲ್ಲೂ ಸಹ ಸೋಂಕಿಗೆ ತುತ್ತಾಗುವ ಸಂಭವ ದಿನೇ ದಿನೇ ಏರಿಕೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಮೆರಿಕದ ವಿಜ್ಞಾನಿಗಳು, ಲಸಿಕೆ ಪಡೆದವರಲ್ಲಿ ಸೋಂಕು ತಗುಲುವು ಸಾಧ್ಯತೆಗಳು ಈ ಹಿಂದೆ ಅಂದುಕೊಂಡದ್ದಕ್ಕಿಂತ ಹೆಚ್ಚಿನ ಸಾಧ್ಯತೆಗಳಿವೆ ಎಂದಿದ್ದಾರೆ.
ಯಾವುದೇ ಲಸಿಕೆ 100 ಪ್ರತಿಶತ ಪರಿಣಾಮಕಾರಿಯಲ್ಲದ ಕಾರಣ ಲಸಿಕೆ ಪಡೆದವರಲ್ಲೂ ಸೋಂಕು ತಗುಲುವ ಪ್ರಕರಣಗಳು ಸಾಮಾನ್ಯವಾಗಿವೆ ಎಂದು ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಹೇಳುತ್ತದೆ.
ಕೋವಿಡ್‌ನಿಂದ ರಕ್ಷಣೆ ಬಗ್ಗೆ ಸಾಕಷ್ಟು ಗೊಂದಲಗಳಿರುವ ಕಾರಣ ಲಸಿಕೆ ಪಡೆದ ಮಂದಿಗೆ ಈ ಬಗ್ಗೆ ಸ್ಪಷ್ಟವಾದ ಅರಿವು ಮೂಡಿಸಿಕೊಳ್ಳುವುದು ಭಾರೀ ಕಷ್ಟವಾಗಿದೆ.
ಡೆಲ್ಟಾವತಾರಿ ವೈರಸ್ ಹಬ್ಬಲು ಆರಂಭಿಸಿದಾಗಿನಿಂದಲೂ ಲಸಿಕೆ ಪಡೆದ ಮಂದಿಯಲ್ಲಿ ಆಸ್ಪತ್ರೆ ಸೇರುವುದು ಹಾಗೂ ಸಾವುಗಳ ಸಂಖ್ಯೆ ವಿಪರೀತವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಇತ್ತೀಚೆಗೆ ವರದಿ ಮಾಡಿದೆ.
ಕ್ಯಾಲಿಫೋರ್ನಿಯಾ, ಕೊಲೊರಾಡೋ, ಮೆಸ್ಸಾಚುಸೆಟ್ಸ್, ಒರೆಗಾಂನ್, ಉತಾಹ್, ವೆರ್ಮಾಂಟ್ ಹಾಗೂ ವರ್ಜೀನಿಯಾ ರಾಜ್ಯಗಳಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಕೋವಿಡ್‌ನ ಹೊಸ ಪ್ರಕರಣಗಳ ಪೈಕಿ ಐದರಲ್ಲಿ ಒಂದು ಪೂರ್ಣವಾಗಿ ಲಸಿಕೆ ಪಡೆದವರಲ್ಲಿ ಕಂಡುಬರುತ್ತಿದೆ ಎಂದು ವರದಿಯೊಂದು ತಿಳಿಸುತ್ತಿದೆ.
ಚೆನ್ನೈನಲ್ಲೂ ಸಹ ಡೆಲ್ಟಾವತಾರೀ ವೈರಸ್‌ನಿಂದ ಬಾಧಿತರಾದವರ ಬಗ್ಗೆ ಐಸಿಎಂಆರ್ ಅಧ್ಯಯನ ನಡೆಸಿದಾಗ, ಲಸಿಕೆ ಪಡೆದವರಿಗೂ, ಪಡೆಯದೇ ಇದ್ದವರಿಗೂ ಈ ಸೋಂಕು ತಗುಲಬಹುದಾದ ಸಾಧ್ಯತೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎನ್ನಲಾಗಿದೆ.