
ನವದೆಹಲಿ: ದೇಶದಲ್ಲಿ ದೈನಂದಿನ ಕೊರೋನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಪ್ರತಿದಿನ ಎರಡು ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರು ಪತ್ತೆಯಾಗುತ್ತಿದ್ದು, ಕೊರೋನಾ ಎರಡನೆಯ ಅಲೆ ತುಂಬಾ ಅಪಾಯಕಾರಿಯಾಗಿದೆ.
ನವಜಾತ ಶಿಶುಗಳು, ಒಂದರಿಂದ ಐದು ವರ್ಷ ವಯಸ್ಸಿನ ಮಕ್ಕಳು ಬಾಧಿತರಾಗುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಕೊರೋನಾ ಎರಡನೆಯ ಅಲೆ ವಿಶೇಷವಾಗಿ 5 ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ವೈದ್ಯರು ಗಮನಿಸಿದ್ದಾರೆ.
ಕೊರೋನಾ 2 ನೇ ಅಲೆ ತುಂಬಾ ಅಪಾಯಕಾರಿ ಎಂದು ಮಕ್ಕಳ ತಜ್ಞರು ಹೇಳಿದ್ದು, ನವಜಾತ ಶಿಶು ಮತ್ತು ಯುವಕರಿಗೆ ಹಾನಿಯಾಗುತ್ತದೆ. 2020 ಕ್ಕೆ ಹೋಲಿಸಿದರೆ ಈಗ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ ಎಂದು ಸರ್ ಗಂಗಾರಾಮ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಧೀರೇನ್ ಗುಪ್ತಾ ತಿಳಿಸಿದ್ದಾರೆ.
ಕೆಲವು ದಿನಗಳಿಂದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು LNJP ಆಸ್ಪತ್ರೆಯ ಮಕ್ಕಳ ತುರ್ತು ವಿಭಾಗದ ಮುಖ್ಯಸ್ಥರಾದ ಡಾ. ರಿತು ಸಕ್ಸೇನಾ ತಿಳಿಸಿದ್ದಾರೆ. ಕೊರೋನಾ ಎರಡನೇ ಅಲೆ ಆರಂಭವಾದಾಗಿನಿಂದ 7 -8 ಮಕ್ಕಳನ್ನು ದಾಖಲಿಸಲಾಗಿದ್ದು, ನವಜಾತ ಶಿಶು ಕೂಡ ಸೋಂಕಿಗೆ ಒಳಗಾಗಿದೆ. 15 ರಿಂದ 30 ವರ್ಷದೊಳಗಿನ ಶೇಕಡ 30 ರಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ರಿತು ಸಕ್ಸೇನಾ ಹೇಳಿದ್ದಾರೆ.
ದೆಹಲಿಯಲ್ಲಿ 16,699 ಹೊಸ ಪ್ರಕರಣಗಳು ದಾಖಲಾಗಿದೆ. ಕೊರೋನಾ ಸಾಂಕ್ರಾಮಿಕ ರೋಗದ ನಾಲ್ಕನೇ ಅಲೆಯನ್ನು ರಾಷ್ಟ್ರ ರಾಜಧಾನಿ ದೆಹಲಿ ಎದುರಿಸುತ್ತಿದೆ.