ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಪಿಪಿಇ ಕಿಟ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ ನಿವೃತ್ತ ನ್ಯಾಯಮೂರ್ತಿ ಕುನ್ಹಾ ನೇತೃತ್ವದ ಆಯೋಗ ವರದಿ ನೀಡಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಶ್ರೀರಾಮುಲು ವಿರುದ್ಧ ತನಿಖೆ ಬಹುತೇಕ ಫಿಕ್ಸ್ ಆಗಿದೆ.
ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುಳಿವು ನೀಡಿದ್ದಾರೆ. ಜಸ್ಟಿಸ್ ಕುನ್ಹಾ ನೇತೃತ್ವದ ಆಯೋಗ, ಕೋವಿಡ್ ಪಿಪಿಇ ಕಿಟ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ತಿಳಿಸಿದೆ. ಆಕ್ಸಿಜನ್ ದುರಂತದ ಬಗ್ಗೆಯೂ ತನಿಖಾ ಆಯೋಗ ಪರಿಶೀಲನೆ ನಡೆಸುತ್ತಿದೆ. ಕುನ್ಹಾ ಅವರ ವರದಿ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.
ತನಿಖೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಆಕ್ಸಿಜನ್ ದುರಂತದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಸಂದರ್ಭಕ್ಕೆ ಆಕ್ಸಿಜನ್ ಕೊಟ್ಟಿದ್ದರೆ ಜೀವ ಉಳಿಯುತ್ತಿತ್ತು. 26 ಜನರು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಇದರ ಬಗ್ಗೆ ಏನು ಕ್ರಮ ಕೈಗೊಳ್ಳಬೇಕಿತ್ತು ಅದನ್ನೂ ಕೈಗೊಂಡಿಲ್ಲ. ಇದನ್ನು ಹಾಗೇ ಬಿಟ್ಟರೆ ಮುಂದೆ ಇಂಥ ಘಟನೆಗಳು ಹೆಚ್ಚಾಗುತ್ತವೆ. ಇಂತಹ ಘಟನೆಗಳು ಮರುಕಳಿಸಬಾರದು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಹೇಳಿದರು.