ಕೋವಿಡ್ 19ನಿಂದ ಬಳಲುತ್ತಿರುವ ತಾಯಿಯು ತನ್ನ ಮಗುವಿಗೆ ಹಾಲುಣಿಸಬಹುದು. ಆದರೆ ಉಳಿದ ಸಮಯದಲ್ಲಿ ಮಗುವಿನಿಂದ 6 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಹಿರಿಯ ವೈದ್ಯರು ಸಲಹೆ ನೀಡಿದ್ದಾರೆ.
ದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ. ಮಂಜು ಪುರಿ ಈ ವಿಚಾರವಾಗಿ ಕೆಲ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕೋವಿಡ್ ಸೋಂಕಿತ ತಾಯಿಯು ತನ್ನ ಮಗುವಿನಿಂದ ಅಂತರ ಕಾಯ್ದುಕೊಳ್ಳಬೇಕು. ಆದರೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಮಗುವಿಗೆ ಹಾಲುಣಿಸಬಹುದಾಗಿದೆ ಎಂದು ಹೇಳಿದ್ರು.
ಕೊರೊನಾ ಹೊಂದಿರದ ವ್ಯಕ್ತಿಯು ಉಳಿದ ಸಮಯದಲ್ಲಿ ನವಜಾತ ಶಿಶುವಿನ ಆರೈಕೆ ಮಾಡಬೇಕು. ಮಗುವಿಗೆ ಹಾಲುಣಿಸುವ ಮುನ್ನ ಸೋಂಕಿತ ತಾಯಿಯು ತನ್ನ ಕೈಗಳನ್ನ ತೊಳೆದುಕೊಳ್ಳಬೇಕು, ಮಾಸ್ಕ್ ಹಾಗೂ ಫೇಸ್ಶೀಲ್ಡ್ಗಳನ್ನು ಧರಿಸಬೇಕು. ಅಲ್ಲದೇ ತನ್ನ ಸುತ್ತಲಿನ ಪ್ರದೇಶವನ್ನ ಸ್ಯಾನಿಟೈಸ್ ಮಾಡಿಕೊಳ್ಳಬೇಕು.
ಮಗುವಿನ ಕಾಳಜಿ ಮಾಡಲು ಯಾರೂ ಇಲ್ಲ ಎಂದಾದ ಪಕ್ಷದಲ್ಲಿ ತಾಯಿ ಎಲ್ಲಾ ಸಮಯದಲ್ಲೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಆದಷ್ಟು ಮಗುವಿನಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಬೇಕು. ಸರಿಯಾಗಿ ಗಾಳಿ – ಬೆಳಕು ಬರುವ ಕೊಠಡಿಯಲ್ಲಿ ತಾಯಿ – ಮಗು ಇರಬೇಕು. ತಾಯಿ ಪದೇ ಪದೇ ತನ್ನ ಕೈಗಳನ್ನ ತೊಳೆದುಕೊಳ್ಳಬೇಕು. ಹಾಗೂ ಸುತ್ತಲಿನ ವಾತಾವರಣವನ್ನೂ ಸ್ವಚ್ಛವಾಗಿಡಬೇಕು ಎಂದು ಪುರಿ ಹೇಳಿದ್ದಾರೆ.