ಪಾಟ್ನಾ: ಬಿಹಾರದ ಬಕ್ಸರ್ ನಲ್ಲಿ ಭೀಕರ ದೃಶ್ಯ ಕಂಡುಬಂದಿದೆ. ಗಂಗಾನದಿಯಲ್ಲಿ ನೂರಾರು ಶವಗಳ ರಾಶಿಯೇ ಪತ್ತೆಯಾಗಿದ್ದು ಕೊರೋನಾ ಸೋಂಕಿತರಿರಬಹುದು ಎಂಬ ಶಂಕೆಯಿಂದ ಆತಂಕ ಎದುರಾಗಿದೆ.
ಬಕ್ಸರ್ ಜಿಲ್ಲೆಯ ಚೌಸಾ ಗ್ರಾಮದ ಸಮೀಪ ಗಂಗಾ ಮಹದೇವ ಘಾಟ್ ಬಳಿ ನೂರಾರು ಮೃತದೇಹಗಳು ತೇಲಿ ಬಂದಿದ್ದು, ನಾಯಿಗಳು ಮೃತದೇಹಗಳನ್ನು ಕಿತ್ತುತಿನ್ನುವ ದೃಶ್ಯಗಳು ಕಂಡು ಬಂದಿದೆ. ಮೃತದೇಹಗಳು ಕೊರೋನಾ ಸೋಂಕಿನಿಂದ ಮೃತಪಟ್ಟವರದಾಗಿರಬಹುದು, ಸೋಂಕು ಸುತ್ತಲಿನ ಗ್ರಾಮಗಳಿಗೂ ಹರಡಬಹುದು ಎಂಬ ಭಯ ಕಾಡುತ್ತಿದೆ.
ಜಿಲ್ಲಾಡಳಿತದಿಂದ ಗಂಗಾ ನದಿಯಲ್ಲಿದ್ದ ನೂರಾರು ಶವಗಳ ತೆರವಿಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ುತ್ತರ ಪ್ರದೇಶದಲ್ಲಿ ಕೊರೋನಾ ಸೋಂಕಿನಿಂದ ಅಪಾರ ಸಂಖ್ಯೆಯ ಜನ ಸಾಯುತ್ತಿದ್ದಾರೆ. ಸ್ಮಶಾನಗಳಲ್ಲಿ ಅಂತ್ಯಸಂಸ್ಕಾರ ಮಾಡಲು ದಿನಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಅಲ್ಲದೆ ಅಂತ್ಯಕ್ರಿಯೆಗೆ ದುಬಾರಿ ವೆಚ್ಚವಾಗುತ್ತಿರುವ ಹಿನ್ನೆಲೆಯಲ್ಲಿ ಮೃತದೇಹಗಳನ್ನು ನದಿಗೆ ಎಸೆಯಲಾಗ್ತಿದೆ. ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಮೃತದೇಹಗಳು ತೀರಕ್ಕೆ ಬಂದಿವೆ ಎಂದು ಹೇಳಲಾಗಿದೆ.
ಸುಮಾರು 400 ರಿಂದ 500 ಮೃತದೇಹಗಳನ್ನು ನೋಡಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಬಿಹಾರದಲ್ಲಿ ಮೃತಪಟ್ಟವರಲ್ಲಿ ಉತ್ತರ ಪ್ರದೇಶದಿಂದ ಬಂದಿರುವ ಮೃತದೇಹಗಳಿವು ಎಂದು ಬಿಹಾರ ಅಧಿಕಾರಿಗಳು ಹೇಳಿದ್ದಾರೆ. ಅಂತ್ಯಕ್ರಿಯೆಗೆ ಸುಮಾರು 40 ಸಾವಿರ ರೂಪಾಯಿ ವೆಚ್ಚವಾಗುತ್ತಿದ್ದು, ಬಡವರು ಮೃತದೇಹಗಳನ್ನು ನದಿಗೆ ಎಸೆದಿರಬಹುದೆಂದು ಶಂಕಿಸಲಾಗಿದೆ.