ಬೆಂಗಳೂರು: ಬೆಳಗಾವಿ ಅಧಿವೇಶನ ನಡೆಯುತ್ತಿರುವ ಹೊತ್ತಲ್ಲೇ ಕೋವಿಡ್ ಹಗರಣ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ಕೋವಿಡ್ ಅಕ್ರಮದ ಬಗ್ಗೆ ಮೊದಲ ಎಫ್ಐಆರ್ ದಾಖಲಿಸಲಾಗಿದೆ.
ಕೋವಿಡ್ ನಿರ್ವಹಣೆ ವೇಳೆ ಮಾಸ್ಕ್, ಪಿಪಿಇ ಕಿಟ್, ಇತರೆ ಸಲಕರಣೆ ಖರೀದಿಯಲ್ಲಿ ಸುಮಾರು 167 ಕೋಟಿ ರೂ. ಅಕ್ರಮ ನಡೆದ ಆರೋಪ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದು ಅಕ್ರಮ ಸಂಬಂಧ ದಾಖಲಾದ ಮೊದಲ ಎಫ್ಐಆರ್ ಆಗಿದೆ. ಇದರ ಬೆನ್ನಲ್ಲೇ ಸರ್ಕಾರ ಎಸ್ಐಟಿ ರಚಿಸುವ ಸಾಧ್ಯತೆ ಇದೆ.
ಕೋವಿಡ್ ನಿರ್ವಹಣೆ ವೇಳೆ 167 ಕೋಟಿ ರೂ. ಅವ್ಯವಹಾರ ನಡೆದ ಆರೋಪದ ಮೇಲೆ ವಿಧಾನಸೌಧ ಠಾಣೆಯಲ್ಲಿ ವೈದ್ಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಪತ್ರ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಮೂವರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಇದರಲ್ಲಿ ಜನ ಪ್ರತಿನಿಧಿಗಳ ಹೆಸರು ಉಲ್ಲೇಖಿಸಿಲ್ಲ ಎನ್ನಲಾಗಿದೆ.