ಇಡೀ ವಿಶ್ವಕ್ಕೆ ಕೋವಿಡ್ ಮಹಾಮಾರಿಯನ್ನು ಹರಡಿದ ಕುಖ್ಯಾತಿ ಹೊಂದಿರುವ ಚೀನಾದಲ್ಲಿ ಈಗ ಓಮಿಕ್ರಾನ್ ಉಪತಳಿ ಬಿಎಫ್ 7 ಅಬ್ಬರಿಸುತ್ತಿದ್ದು ಪ್ರತಿನಿತ್ಯ 10 ಲಕ್ಷದಷ್ಟು ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿವೆ ಎನ್ನಲಾಗಿದೆ.
ಇದರ ಪರಿಣಾಮ ಚೀನಾದ ಎಲ್ಲಾ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಐಸಿಯು ಸಿಗುವುದು ಸಹ ಸಮಸ್ಯೆಯಾಗಿದೆ ಎಂದು ಹೇಳಲಾಗುತ್ತಿದೆ. ಶಾಂಘೈ, ಬೀಜಿಂಗ್ ನಂತಹ ಮಹಾನಗರಗಳಲ್ಲೂ ಪರಿಸ್ಥಿತಿ ಕೈ ಮೀರಿದ್ದು, ಚಿಕಿತ್ಸೆಗಾಗಿ ಜನ ಪರದಾಡುವಂತಾಗಿದೆ.
ಇಷ್ಟಾದರೂ ಸಹ ಚೀನಾ ಸೋಂಕಿನ ಕುರಿತು ವಿಶ್ವ ಸಮುದಾಯದ ಜೊತೆ ಯಾವುದೇ ಮಾಹಿತಿ ಹಂಚಿಕೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿಯೇ ವಿಶ್ವ ಆರೋಗ್ಯ ಸಂಸ್ಥೆ, ಚೀನಾ ನಿಖರ ಮಾಹಿತಿ ನೀಡಿದರೆ ಜಗತ್ತಿಗೆ ಹೊಸ ತಳಿಯ ಸೋಂಕು ಹರಡದಂತೆ ತಡೆಗಟ್ಟಬಹುದಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.