ಕೋವಿಡ್ ವೈರಾಣು ವಿರುದ್ಧ ಜನತೆ ಯಾವ ಮಟ್ಟಿಗೆ ಪ್ರತಿರೋಧಕ ಶಕ್ತಿ ಬೆಳೆಸಿಕೊಂಡಿದ್ದಾರೆ ಎಂದು ಒಡಿಶಾದ 12 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) ಆಸಕ್ತಿಕರ ವಿಷಯಗಳನ್ನು ಬೆಳಕಿಗೆ ತಂದಿದೆ.
ಸಮೀಕ್ಷೆ ನಡೆಸಿದ ಮಂದಿಯ ಪೈಕಿ 73% ಹಾಗೂ ಆರೋಗ್ಯ ಕಾರ್ಯಕರ್ತರ ಪೈಕಿ 93% ಮಂದಿಯಲ್ಲಿ ಕೋವಿಡ್ ವಿರುದ್ಧ ಪ್ರತಿರೋಧಕ ಶಕ್ತಿ ಬೆಳೆದಿದೆ ಎಂದು ಐಸಿಎಂಆರ್ ತಿಳಿಸಿದೆ.
ಆಗಸ್ಟ್ 29ರಿಂದ ಸೆಪ್ಟೆಂಬರ್ 15ರ ನಡುವೆ 12 ಜಿಲ್ಲೆಗಳಿಂದ ಒಟ್ಟಾರೆ 5,596 ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದ್ದು, ಇವರಲ್ಲಿ 4,247 ಮಂದಿಗೆ ಪ್ರತಿರೋಧಕ ಶಕ್ತಿ ಬೆಳೆದಿದೆ ಎಂದು ಸೆರೋ-ಸಮೀಕ್ಷೆಯ ವೇಳೆ ಕಂಡುಬಂದಿದೆ.
ಇದೇ ವೇಳೆ 1312 ಆರೋಗ್ಯ ಕಾರ್ಯಕರ್ತರ ಮೇಲೂ ಅಧ್ಯಯನ ನಡೆಸಲಾಗಿದ್ದು, 1,232 ಮಂದಿಯಲ್ಲಿ ಪ್ರತಿರೋಧಕ ಶಕ್ತಿ ಬೆಳೆದಿರುವುದು ಕಂಡು ಬಂದಿದೆ ಎಂದು ಭುವನೇಶ್ವರದಲ್ಲಿರುವ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಸಂಘಮಿತ್ರಾ ಪಾಟಿ ತಿಳಿಸಿದ್ದಾರೆ.
ಸಮೀಕ್ಷೆಯನ್ನು ಐಸಿಎಂಆರ್‌ನ ಪ್ರಾದೇಶಿಕ ಶಾಖೆ ಹಾಗೂ ಒಡಿಶಾ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
“ಸಮುದಾಯದ ಪೈಕಿ 73.5 ಪ್ರತಿಶತ ಮಂದಿಯಲ್ಲಿ ಸೆರೋ ಅಂಶ ಕಂಡುಬಂದಿದ್ದು, ಇದೇ ಅಂಶ ಆರೋಗ್ಯ ಕಾರ್ಯರ್ತರ ಪೈಕಿ 93.9 ಪ್ರತಿಶತ ಮಂದಿಯಲ್ಲಿ ಕಂಡುಬಂದಿದೆ. 6-10ರ ವಯೋಮಾನದವರ ಪೈಕಿ 70% ಮಂದಿಯಲ್ಲಿ ನಿರೋಧಕ ಶಕ್ತಿ ಬೆಳೆದಿದ್ದು, 11-18ರ ವಯೋಮಾನದವರ ಪೈಕಿ 74%, 19-44ರ ವಯೋಮಾನದವರ ಪೈಕಿ 75%, 45-60ರ ವಯೋಮಾನದವರ ಪೈಕಿ 60%, ಹಾಗೂ 60ರ ಮೇಲ್ಪಟ್ಟವರ ಪೈಕಿ 66% ಮಂದಿಯಲ್ಲಿ ಪ್ರತಿರೋಧಕ ಶಕ್ತಿ ಕಂಡುಬಂದಿದೆ,” ಎಂದು ಪಾಟಿ ತಿಳಿಸಿದ್ದಾರೆ.