ದೇಶದಲ್ಲಿ ಕೊರೊನಾ ವೈರಸ್ ಮೂರನೇ ಅಲೆ ಭಯ ಶುರುವಾಗಿದೆ. ಕೊರೊನಾದ ಡೆಲ್ಟಾ ರೂಪಾಂತರವು ಪ್ರಪಂಚದಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿದೆ. ಇದೇ ಕಾರಣಕ್ಕೆ ಅನೇಕ ತಜ್ಞರು ಲಸಿಕೆಯ ಮೂರನೇ ಡೋಸ್ ಬಗ್ಗೆ ಮಾತನಾಡುತ್ತಿದ್ದಾರೆ. ಅಂದ್ರೆ ಬೂಸ್ಟರ್ ಶಾಟ್.
ಲಸಿಕೆಯ ಮೂರನೇ ಡೋಸ್ ನಿಂದ ಕೊರೊನಾ ದಾಳಿಯನ್ನು ದೀರ್ಘಕಾಲದವರೆಗೆ ನಿಲ್ಲಿಸಬಹುದು ಎನ್ನಲಾಗ್ತಿದೆ. ಮತ್ತೊಂದೆಡೆ, ಕೆಲವು ತಜ್ಞರು ಪ್ರಸ್ತುತ ಲಸಿಕೆಯ ಬೂಸ್ಟರ್ ಅಗತ್ಯವಿಲ್ಲ ಎನ್ನುತ್ತಿದ್ದಾರೆ. ಸದ್ಯ ಜನರಿಗೆ ಲಸಿಕೆಯ ಕನಿಷ್ಠ ಒಂದು ಡೋಸ್ ಅಗತ್ಯವಿದೆ ಎಂದು ತಜ್ಞರು ಹೇಳ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ ಫಿಜರ್ ತನ್ನ ಲಸಿಕೆಯ ಮೂರನೇ ಪ್ರಮಾಣವನ್ನು ನೀಡಲು ಯುಎಸ್ ಮತ್ತು ಯುರೋಪಿಯನ್ ಅಧಿಕಾರಿಗಳಿಗೆ ಅನುಮತಿ ಕೇಳುವುದಾಗಿ ಹೇಳಿದೆ. ಇದು ಕೊರೊನಾ ವಿರುದ್ಧ ಹೋರಾಡಲು ಜನರಿಗೆ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿದೆ. ಎರಡು ಡೋಸ್ ಲಸಿಕೆಯೊಂದಿಗೆ ಜನರು ಕನಿಷ್ಠ 6 ತಿಂಗಳವರೆಗೆ ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಮಿತಿಯ ನಿರ್ದೇಶಕ ಡಿಡಿಯರ್ ಹುಸೇನ್, ಮೂರನೇ ಡೋಸ್ ಶಿಫಾರಸು ಮಾಡಲು ಈ ಸಮಯದಲ್ಲಿ ಯಾವುದೇ ಸಂಪೂರ್ಣ ಮಾಹಿತಿ ಇಲ್ಲ ಎಂದಿದ್ದಾರೆ. ಮೂರನೇ ಡೋಸ್ ಅಗತ್ಯವಿದೆಯೇ ಎಂಬ ಬಗ್ಗೆ ಇನ್ನಷ್ಟು ಅಧ್ಯಯನದ ಅಗತ್ಯವಿದೆ ಎಂದವರು ಹೇಳಿದ್ದಾರೆ.
ಇಸ್ರೇಲ್, ಫ್ರಾನ್ಸ್ ನಲ್ಲಿ ಈಗಾಗಲೇ ಮೂರನೇ ಡೋಸ್ ನೀಡಲಾಗ್ತಿದೆ. ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವ ಜನರಿಗೆ ಮೂರನೇ ಡೋಸ್ ನೀಡುವುದಾಗಿ ಜಪಾನ್ ಹೇಳಿದೆ. ಫ್ರಾನ್ಸ್, ಸೆಪ್ಟೆಂಬರ್ ನಿಂದ ಬೂಸ್ಟರ್ ಡೋಸ್ ನೀಡುವುದಾಗಿ ಘೋಷಿಸಿದೆ.