ಕೊರೊನಾ ವೈರಸ್ನಿಂದಾಗಿ ಕಂಗೆಟ್ಟಿರುವ ದೇಶದ ಜನತೆ ಕೊರೊನಾ ಲಸಿಕೆಯನ್ನ ಪಡೆಯೋಕೆ ಇನ್ನಿಲ್ಲದ ಪ್ರಯತ್ನವನ್ನ ಪಡ್ತಿದ್ದಾರೆ. ಕೊರೊನಾ ಲಸಿಕೆಯಿಂದ ಸೋಂಕಿನ ಅಪಾಯವೇ ಇಲ್ಲ ಎಂದಲ್ಲ. ಆದರೆ ಸೋಂಕಿನ ವಿರುದ್ಧ ಹೋರಾಡಲು ದೇಹದ ಸಾಮರ್ಥ್ಯ ಹೆಚ್ಚಾಗೋದ್ರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಲಸಿಕೆ ಪಡೆಯೋದು ಅನಿವಾರ್ಯವಾಗಿದೆ.
ಕೊರೊನಾ ಲಸಿಕೆಗಳು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದ್ದರೂ ಸಹ ಲಸಿಕೆ ಪಡೆದುಕೊಂಡ ಅನೇಕರಲ್ಲಿ ಸೈಡ್ ಎಫೆಕ್ಟ್ಗಳು ಕಂಡುಬಂದಿರೋದನ್ನ ನೀವು ಗಮನಿಸಿದ್ದರಬಹುದು. ಹೀಗಾಗಿ ಕೊರೊನಾ ಲಸಿಕೆಯನ್ನ ಪಡೆಯುವ ಮುನ್ನ ಹಾಗೂ ಪಡೆದ ಬಳಿಕ ಯಾವೆಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಅನ್ನೋದರ ಬಗ್ಗೆ ತಜ್ಞರು ನೀಡಿರುವ ಕೆಲ ಸಲಹೆಗಳ ವಿವರ ಇಲ್ಲಿದೆ ನೋಡಿ.
ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಮೂರು ಲಸಿಕೆಗಳಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ…. ?
ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ ವಿ ಲಸಿಕೆಗಳು ದೇಶದಲ್ಲಿ ಲಭ್ಯವಿದೆ. ಈ ಮೂರು ಲಸಿಕೆಗಳು ಕೊರೊನಾ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾಗಿವೆ. ಕೊರೊನಾ ಬಂದ ಸಂದರ್ಭದಲ್ಲಿ ಉಂಟಾಗುವ ಗಂಭೀರ ಲಕ್ಷಣಗಳನ್ನ ಕಡಿಮೆ ಮಾಡುವ ಸಾಮರ್ಥ್ಯ ಲಸಿಕೆಗಳಿಗೆ ಇದೆ.
ಲಸಿಕೆ ಪಡೆಯುವ ಮುನ್ನ ಹಾಗೂ ನಂತರ ನೀವು ಮಾಡಬೇಕಾದದ್ದು ಏನು..?
1. ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಎಂದಿಗೂ ಖಾಲಿ ಹೊಟ್ಟೆಯಲ್ಲಿ ಹೋಗಬೇಡಿ. ಆರೋಗ್ಯಯುತ ಆಹಾರವನ್ನ ಸೇವನೆ ಮಾಡಿ ಲಸಿಕೆ ಸ್ವೀಕರಿಸಲು ತೆರಳಿರಿ.
2. ಕೊರೊನಾ ಲಸಿಕೆ ಪಡೆಯಲು ಹೊರಡುವ ಮುನ್ನ ಆದಷ್ಟು ನೀರು ಕುಡಿಯಿರಿ.
3. ಮದ್ಯಪಾನದಿಂದ ನಿಮಗೆ ನಿರ್ಜಲೀಕರಣ ಸಮಸ್ಯೆ ಉಂಟಾಗೋ ಸಾಧ್ಯತೆ ಇರೋದ್ರಿಂದ ಈ ಅಭ್ಯಾಸಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿ.
4. ಕೊರೊನಾ ಲಸಿಕೆಯನ್ನ ಪಡೆದ ದಿನ ಚೆನ್ನಾಗಿ ನಿದ್ರೆ ಮಾಡಿ.
ಲಸಿಕೆಯನ್ನ ಪಡೆದ ಬಳಿಕ 15 ರಿಂದ 30 ನಿಮಿಷಗಳ ಕಾಲ ಲಸಿಕಾ ಕೇಂದ್ರದಲ್ಲೇ ಕುಳಿತುಕೊಳ್ಳಿ. ನಿಮಗೆ ವಾಂತಿ, ಸುಸ್ತು, ನಿತ್ರಾಣ ಹಾಗೂ ಜ್ವರ ಬಂದಂತೆ ಎನಿಸಿದ್ರೆ ಕೂಡಲೇ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಿ.
ಕೊರೊನಾ ಲಸಿಕೆ ಪಡೆದ ಬಳಿಕ ಜ್ವರ, ಮೈ ಕೈ ನೋವು ಬರೋದು ಸಾಮಾನ್ಯ ಲಕ್ಷಣವಾಗಿರೋದ್ರಿಂದ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಒಂದೆರಡು ದಿನಗಳಲ್ಲಿ ಈ ನೋವು ವಾಸಿಯಾಗಲಿದೆ.